ADVERTISEMENT

ಮಳೆ ಮಧ್ಯೆ ಸರಳ ದಸರಾಗೆ ತೆರೆ

ಗಜಪಡೆಯೊಂದಿಗೆ ಯುವಪಡೆ ಸೆಲ್ಫಿ, ಮೆರವಣಿಗೆಯಲ್ಲಿ ಸೀಮಿತ ದೇವರ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:46 IST
Last Updated 27 ಅಕ್ಟೋಬರ್ 2020, 3:46 IST
ದಸರಾ ಅಂಗವಾಗಿ ಶಿವಮೊಗ್ಗ ಕೋಟೇ ಆಂಜನೇಯ ದೇವಸ್ಥಾನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು.
ದಸರಾ ಅಂಗವಾಗಿ ಶಿವಮೊಗ್ಗ ಕೋಟೇ ಆಂಜನೇಯ ದೇವಸ್ಥಾನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು.   

ಶಿವಮೊಗ್ಗ: ಕೊರೊನಾ ಕಾರಣದಿಂದಾಗಿ ಒಂದೇ ದಿನಕ್ಕೆ ಸೀಮಿತವಾಗಿದ್ದ ಶಿವಮೊಗ್ಗ ದಸರಾ ಮಳೆಯ ಮಧ್ಯೆಯೂ ಯಶಸ್ವಿಯಾಗಿ ತೆರೆ ಕಂಡಿತು.

‘ಶಿವಮೊಗ್ಗ ದಸರಾ’ಗೆ ಸೋಮವಾರ ನಗರದ ಫ್ರೀಡಂ ಪಾರ್ಕ್(ಹಳೇ ಜೈಲು ಆವರಣ)ನಲ್ಲಿ ತಹಶೀಲ್ದಾರ್ ನಾಗರಾಜ್ ಅಂಬು ಕಡಿಯುವ ಮೂಲಕ ಸಮಾರೋಪಗೊಳಿಸಿದರು. ಪರಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಜನರು ಶುಭಾಶಯ ವಿನಿಮಯ ಮಾಡಿಕೊಂಡರು.

ಮಹಾನಗರದ ‍ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್, ಆಯುಕ್ತ ಚಿದಾನಂದ್ ವಟಾರೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೇಶ್ ಸೇರಿ ಸದಸ್ಯರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ADVERTISEMENT

ಇದಕ್ಕೂ ಮೊದಲು ಶಿವಮೊಗ್ಗ ದಸರಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಮುಂಡೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದರು. ಸಕ್ರೆಬೈಲ್ ಆನೆ ಬಿಡಾರದ ಸಾಗರ, ಭಾನುಮತಿ, ಬಾಲಣ್ಣ ಆನೆಗಳು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದವು.

ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಕೋಟೆ ರಸ್ತೆ, ಎಸ್‌ಪಿಎಂ ರಸ್ತೆ, ಗಾಂಧಿಬಜಾರ್ ಮುಖ್ಯರಸ್ತೆ, ಅಮೀರ್ ಅಹಮದ್‌ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ ರಸ್ತೆ, ಕುವೆಂಪು ರಸ್ತೆ ಮಾರ್ಗವಾಗಿ ಹಳೇ ಜೈಲು ಆವರಣದಲ್ಲಿ ಬನ್ನಿ ಮುಡಿಯುವ ಮೂಲಕ ಮುಕ್ತಾಯಗೊಂಡಿತು.

ಸರಳ ದಸರಾ: ಸರಳ ದಸರಾ ಆಚರಣೆ ಕಾರಣ ಈ ಬಾರಿ ಎರಡು ಸಮಿತಿಗಳನ್ನಷ್ಟೇ ಮಾಡಲಾಗಿತ್ತು. ಸ್ವಾಗತ ಮತ್ತು ಉತ್ಸವ ಸಮಿತಿಗೆ ಮೇಯರ್ ಸುವರ್ಣ ಶಂಕರ್ ಅಧ್ಯಕ್ಷರಾಗಿದ್ದರು. ಅಲಂಕಾರ ಸಮಿತಿಗೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೇಶ್ ಅಧ್ಯಕ್ಷರಾಗಿದ್ದರು.

ಹೆಚ್ಚಿನ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ. ಸ್ಥಳೀಯ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಉತ್ಸವ ಮೂರ್ತಿಗಳು ಬರಲಿಲ್ಲ:ಪ್ರತಿ ವರ್ಷದ ವಿಷಯ ದಶಮಿ ದಿನದಂದು ನಗರ 150 ದೇವರ ಮೂರ್ತಿಗಳು ಮೆರವಣಿಗೆ ಮೂಲಕ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದವು. ಆದರೆ, ಈ ಬಾರಿ ಜನರಿಗಷ್ಟೇ ಅಲ್ಲ ದೇವರಿಗೂ ಬನ್ನಿ ಮುಡಿಯುವ ಸ್ಥಳಕ್ಕೆ ಪ್ರವೇಶ ಇರಲಿಲ್ಲ. ಕೆಲವೇ ಕೆಲವು ದೇವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಉಳಿದ ಎಲ್ಲ ದೇವಸ್ಥಾನಗಳ ಅಲಂಕಾರಕ್ಕೆ ಪಾಲಿಕೆಯಿಂದ ಸಹಾಯಧನ ನೀಡಲಾಗಿತ್ತು.

ಮಳೆ ಅಡ್ಡಿ:ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೆಯ ದೇವಸ್ಥಾನ ಮುಂಭಾಗ ಇರುವ ನಂದಿ ಧ್ವಜ ಪೂಜೆಗೆ ಮಳೆ ಅಡ್ಡಿಯಾಯಿತು. ಇದರಿಂದ ನಂದಿ ದ್ವಜ ಪೂಜೆ ತಡವಾಯಿತು. ಪೂಜೆಗೆ ಬಂದಿದ್ದ ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಕೆಳಗೆ ನಿಂತರು.

ಮೆರವಣಿಗೆ ಉದ್ಘಾಟನೆ ಮಧ್ಯಾಹ್ನ 3ಕ್ಕೆ ನಿಗದಿಯಾಗಿತ್ತು. ಆದರೆ, ಕಾರ್ಯಕ್ರಮ ಸುಮಾರು ಒಂದು ತಾಸು ತಡವಾಗಿ ಆರಂಭವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ, ಪಾಲಿಕೆ ಮೇಯರ್, ಸದಸ್ಯರು ಸಂಜೆ 4ಕ್ಕೆ ಹೊತ್ತಿಗೆ ಬಂದರು. ಈ ನಡುವೆ ಮಳೆಯಿಂದಾಗಿ ಮೆರವಣಿಗೆ ತಡವಾಯಿತು.

ಕುಸಿದು ಬಿದ್ದ ಪೆಂಡಾಲ್: ಸೋಮವಾರ ಸಂಜೆ ಸುರಿದ ಜೋರು ಮಳೆಗೆ ಹಳೆ ಜೈಲು ಆವರಣದಲ್ಲಿ ಇರುವ ಬನ್ನಿ ಮಂಟಪದ ಪಕ್ಕದ ದೇವಸ್ಥಾನದ ಉತ್ಸವ ಮೂರ್ತಿ ನಿಲ್ಲಿಸಲು ನಿರ್ಮಿಸಿದ್ದ ಪೆಂಡಾಲ್ ಕುಸಿದು ಬಿದ್ದಿತ್ತು. ಗಾಳಿ, ಮಳೆಗೆ ಪೆಂಡಾಲ್ ಕುಸಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವುಗೊಳಿಸಿದರು.

ಗಜಪಡೆಯೊಂದಿಗೆ ಯುವಪಡೆ ಸೆಲ್ಫಿ

ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆಯಾದ ಸಕ್ರೆಬೈಲಿನ ಗಜಪಡೆ ಜೊತೆಗೆ ಸೆಲ್ಫಿತೆಗೆದುಕೊಳ್ಳಲು ಜನರು ಮುಗಿಬಿದ್ದರು. ಮಕ್ಕಳು ಆನೆಗಳನ್ನು ಮುಟ್ಟಿ ಖುಷಿಪಟ್ಟಿರು. ದಸರಾ ಮೆರವಣಿಗೆ ಕಾರಣ ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ಅಲಂಕಾರ ಮಾಡಲಾಯಿತು. ಬಣ್ಣದ ಚಿತ್ತಾರಗಳಿಂದ ಸಕ್ರೆಬೈಲಿನ ಸಾಗರ, ಭಾನುಮತಿ, ಬಾಲಣ್ಣ ಆನೆಗಳು ಎಲ್ಲ ಕಣ್ಮನ ಸೆಳೆಯಿತು.

ಆನೆಯೊಂದಿಗೆ ಫೋಟೊ ತೆಗೆದುಕೊಳ್ಳಲು ಮುಗಿಬಿದ್ದ ಜನರನ್ನು ನಿಯಂತ್ರಿಸಲು ಸಕ್ರೆಬೈಲು ಬಿಡಾರದ ಸಿಬ್ಬಂದಿ ಕಷ್ಟಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.