ADVERTISEMENT

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರಲ್ಲೂ ಆಪರೇಷನ್ ಕಮಲ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 10:30 IST
Last Updated 14 ಜುಲೈ 2020, 10:30 IST
ಬಿಜೆಪಿ (ಸಾಂದರ್ಭಿಕ ಚಿತ್ರ)
ಬಿಜೆಪಿ (ಸಾಂದರ್ಭಿಕ ಚಿತ್ರ)   

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರನ್ನು ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿ ಸದ್ದಿಲ್ಲದೇ ಅಧಿಕಾರ ಗದ್ದುಗೆ ಹಿಡಿಯಲು ಸಿದ್ಧತೆ ನಡೆಸಿದೆ.

ರಮೇಶ್, ಉಮಾವತಿ ರಾಜೀನಾಮೆ ನೀಡಿದ ಸದಸ್ಯರು. ಆ ಮೂಲಕ ಬಿಜೆಪಿ, ಕಾಂಗ್ರೆಸ್ ಪುರಸಭೆಯಲ್ಲಿ ಸಮಬಲ ಸಾಧಿಸಿದಂತಾಗಿದೆ.

2019ರಮೇನಲ್ಲಿ ಪುರಸಭೆಗೆ ಚುನಾವಣೆ ನಡೆದಿತ್ತು. 23 ಸದಸ್ಯರಲ್ಲಿ ಕಾಂಗ್ರೆಸ್‌ನ 12, ಬಿಜೆಪಿಯ 8 ಹಾಗೂ ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಮೊದಲ ಅವಧಿಯ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ತಕ್ಷಣ ನ್ಯಾಯಯುತ ಮೀಸಲಾತಿ ಪ್ರಕಟಿಸಿ, ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲು ಸೂಚನೆ ನೀಡಿದ್ದರೂ ಸರ್ಕಾರ ಇದುವರೆಗೂ ಕ್ರಮ ಕೈಗೊಂಡಿಲ್ಲ. ಚುನಾವಣೆ ನಡೆದು 14 ತಿಂಗಳಾದರೂ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ದೊರೆತಿಲ್ಲ.

ADVERTISEMENT

‘ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹಲವು ತಂತ್ರ ಮಾಡುತ್ತಾ ಬಂದಿದ್ದಾರೆ. ಚುನಾವಣೆ ನಡೆದು 14 ತಿಂಗಳಾದರೂ ಚುನಾಯಿತ ಆಡಳಿತ ಸಾಧ್ಯವಾಗಿಲ್ಲ. ಅಧಿಕಾರ ಹಿಡಿಯಲು ಈಗ ಆಪರೇಷನ್ ಕಮಲ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ಪಿತೂರಿ ವಿರುದ್ಧ ಜುಲೈ 15ರಂದು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಪುರಸಭೆ ಸದಸ್ಯರೂ ಆದ ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಯೂರ್ ದರ್ಶನ್ ಉಳ್ಳಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.