ಬಿ.ವೈ.ವಿಜಯೇಂದ್ರ
ಶಿವಮೊಗ್ಗ: ಪಾಕಿಸ್ತಾನದ ಭಯೋತ್ಪಾದಕರ ವಿರುಧ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ತಿರಂಗಾ ಯಾತ್ರೆ ನಡೆಸಲಿದೆ. ಮೇ 14ರಂದು ಬೆಂಗಳೂರಿನಲ್ಲಿ ಯಾತ್ರೆಗೆ ವಿದ್ಯುಕ್ತ ಚಾಲನೆ ದೊರಕಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ತಿರಂಗಾ ಯಾತ್ರೆ ಪಕ್ಷಾತೀತವಾಗಿ ಇರಲಿದೆ. ಇದರಲ್ಲಿ ಬರೀ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ ಮಾಜಿ ಯೋಧರು, ರೈತರು, ಸಮಾಜದ ಎಲ್ಲ ವರ್ಗದ ಜನರು, ಮಹಿಳೆಯರು ಪಾಲ್ಗೊಳ್ಳಲಿದ್ದಾರೆ' ಎಂದರು.
ತಿರಂಗಾ ಯಾತ್ರೆ ಮೇ 15ರಂದು ಮಂಗಳೂರಿನಲ್ಲಿ ನಂತರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ಬೂತ್ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಯಾತ್ರೆಯ ಭಾಗವಾಗಿ ನಡೆಯುವ ಮೆರವಣಿಗೆಯಲ್ಲಿ ಸಾವಿರಾರು ಜನರು ರಾಷ್ಟ್ರ ಧ್ವಜ ಹಿಡಿದು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಯುದ್ಧ ನಿಲ್ಲಿಸುವಂತೆ ಪಾಕಿಸ್ತಾನ ಅಮೆರಿಕವನ್ನು ಸಂಪರ್ಕಿಸಿ ಬೇಡಿಕೊಂಡ ಪರಿಣಾಮವಾಗಿ ಭಾರತ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿತು. ಇದು ದೇಶದ ರಾಜನೀತಿಯ ಭಾಗವೇ ಹೊರತು ಅಮೆರಿಕದ ಒತ್ತಡ ತಂತ್ರ ಕಾರಣವಲ್ಲ ಎಂದು ವಿಜಯೇಂದ್ರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಯುದ್ಧ ವಿರಾಮಕ್ಕೆ ಒಪ್ಪಿಕೊಂಡು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಕೆಲವು ಮುಖಂಡರು ಹಗುರವಾಗಿ ಮಾತನಾಡಲು ಆರಂಭಿಸಿದ್ದಾರೆ. ಅದು ಸರಿಯಲ್ಲ. ವಾಸ್ತವವಾಗಿ ಈಗ ಘೋಷಿಸಿರುವ ಯುದ್ದ ವಿರಾಮ ಶಾಶ್ವತ ಅಲ್ಲ. ಮುಂದೆ ದೇಶದ ಮೇಲೆ ಯಾವುದೇ ಭಯೋತ್ಪಾದಕ ದಾಳಿ ಆದರೂ ಅದನ್ನು ಭಾರತದ ಮೇಲಿನ ಯುದ್ಧಕ್ಕೆ ಸಮ ಎಂದು ಭಾವಿಸಬೇಕಾಗುತ್ತದೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ನೀಡಿದ್ದಾರೆ. ಪಾಕಿಸ್ತಾನ ಇರಬೇಕಾದರೆ ಉಗ್ರ ಸಂಘಟನೆಗಳಿಗೆ ಯಾವುದೇ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ ಎಂದರು.
ಈ ವಿಚಾರದಲ್ಲಿ ಅನಗತ್ಯ ರಾಜಕಾರಣ ಸಲ್ಲ. ಇಂತಹ ಹೊತ್ತಿನಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾರತೀಯ ಸೇನೆಯನ್ನು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಗೌರವಿಸಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಎಸ್.ರುದ್ರೇಗೌಡ ಬಿಜೆಪಿ ಜಿಲ್ಲಾ ವಕ್ತಾರ ಕೆ.ವಿ.ಅಣ್ಣಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.