ADVERTISEMENT

ಶಿವಮೊಗ್ಗ: ಆಸ್ತಿ ತೆರಿಗೆ ಹೆಚ್ಚಳಕ್ಕೆ ವ್ಯಾಪಕ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:04 IST
Last Updated 13 ಜನವರಿ 2021, 13:04 IST

ಶಿವಮೊಗ್ಗ: ಜನರು ಕೊರೊನಾ ಕಾರಣಗಳಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯ ಸಚಿವ ಸಂಪುಟ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಮ್ಮತಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಪಾಲಿಕೆ ಈಗಾಲೇ ಆಸ್ತಿ ತೆರಿಗೆ ಹಾಗೂ ಹೊಸ ನೀರಿನ ಸಂಪರ್ಕ ಶುಲ್ಕ ಹೆಚ್ಚಳ ಮಾಡಿದೆ ಎಂದು ಸಾರ್ವಜನಿಕರು ಅಕ್ಷೇಪಿಸಿದ್ದಾರೆ.

ಅವೈಜ್ಞಾನಿಕ ಆದೇಶ:ಬರಗಾಲದಲ್ಲಿ ಮನೆಮಗನಿಗೆ ಹಸಿವು ಜಾಸ್ತಿ ಅನ್ನುವ ಹಾಗೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಕ್ರಮ ನಿಜಕ್ಕೂ ಅವೈಜ್ಞಾನಿಕ. ಸಂಕಷ್ಟ ಸಮಯದಲ್ಲಿ ಈ ರೀತಿ ಆದೇಶಗಳು ಸರಿಯಲ್ಲ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ವಿ.ವಂಸತ್ ಕುಮಾರ್‌ ಆಕ್ಷೇಪಿಸಿದ್ದಾರೆ.

ADVERTISEMENT

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ:ಕೊರೊನಾದಿಂದ ಜನರು ನಲುಗು ಹೋಗಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ತೆರಿಗೆ ಹೆಚ್ಚಳ ಕ್ರಮ ಸೂಕ್ತವಲ್ಲ. ಸರ್ಕಾರ ಸಂಕಷ್ಟ ಪರಿಸ್ಥಿತಿಯಲ್ಲಿ ಆದಾಯ ಹೆಚ್ಚಳ ಮಾಡುವತ್ತ ಗಮನ ಹರಿಸುತ್ತಿವೆ ಹೊರೆತು, ಖರ್ಚಿನ ಬಗ್ಗೆ ಗಮನ ಹರಿಸುತ್ತಿಲ್ಲ. ದುಂದು ವೆಚ್ಚ ಕಡಿಮೆ ಮಾಡಿದರೆ ಆದಾಯ ಗಳಿಕೆಯಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಈ ಬಗ್ಗೆ ಆಡಳಿತ ಸಂಸ್ಥೆಗಳು ಗಮನ ಹರಿಸಬೇಕು. ಜನರು ಆರ್ಥಿಕ ಪರಿಸ್ಥಿತಿ ಸುಧಾರಣೆವರೆಗೆ ತೆರಿಗೆ ಹೆಚ್ಚಳ ಸರಿಯಲ್ಲ ಎಂದು ಜಿಲ್ಲಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನ ವಿರೋಧಿ ನಿಲುವು:ಜನರ ಕಷ್ಟಗಳಿಗೆ ಅನುಕೂಲವಾಗುವಂತಹ ಆದೇಶಗಳು ಹೊರಡಿಸದೆ ಜನ ವಿರೋಧಿ ನಿಲುವು ತಾಳಿದೆ. ತೆರಿಗೆ ಹೆಚ್ಚಳ ಬಗ್ಗೆ ವಿರೋಧಿಸಿದರೂ ಆಡಳಿತ ಪಕ್ಷ ಹಠಕ್ಕೆ ಬಿದ್ದು ತೆರಿಗೆ ಹೆಚ್ಚಳಕ್ಕೆ ಸಮ್ಮತಿಸಿದೆ. ಜನರನ್ನು ಕಷ್ಟದ ಕೂಪಕ್ಕೆ ತಳ್ಳಿದೆ ಎಂದು ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ ದೂರಿದ್ದಾರೆ.

ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಆಕ್ಷೇಪ:ಕೊರೊನಾ ಕಾರಣದಿಂದಾಗಿ ಜನರು ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದಾರೆ. ಈ ಬಾರಿ ಆಸ್ತಿ ತೆರಿಗೆ ಮಾಡದೇ ಮುಂದಿನ ಬಾರಿ ಆಸ್ತಿ ತೆರಿಗೆ ಮಾಡುವುದು ಸೂಕ್ತ ಎಂದು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದರೂ, ಪಾಲಿಕೆ ಆಡಳಿತ ದರ ಹೆಚ್ಚಳ ಮಾಡಿದೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ ಬುಧವಾರ ಸುದ್ದಿಗೊಷ್ಠಿಯಲ್ಲಿ ದೂರಿದರು.

ಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯವನ್ನು ಪಡೆಯದೇ ಆಸ್ತಿ ತೆರಿಗೆಯನ್ನು ಖಾಲಿ ನಿವೇಶನಕ್ಕೆ, ವಸತಿ ಉದ್ದೇಶದ ಕಟ್ಟಡಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ಹಾಗೂ ಕೈಗಾರಿಕಾ ಉದ್ದೇಶಿತ ಕಟ್ಟಡಗಳಿಗೆ ಶೇ.15ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದರು.

ಹೊಸ ನೀರಿನ ಸಂಪರ್ಕಕ್ಕಾಗಿ ಈ ಹಿಂದೆ ₹ 2,500 ದರ ನಿಗದಿಯಾಗಿತ್ತು. ಈಗ ಅದನ್ನು ಸಹ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆಸ್ತಿ ತೆರಿಗೆ ಹಾಗೂ ಹೊಸ ನೀರಿನ ಸಂಪರ್ಕದ ದರ ಹೆಚ್ಚಳ ಬಗ್ಗೆ ಸಭೆಯ ಗಮನಕ್ಕೆ ತಂದಿಲ್ಲ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಇದರ ಬಗ್ಗೆ ಚರ್ಚೆ ನಡೆಸಿ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.