ADVERTISEMENT

ಬೆಂಬಲ ಬೆಲೆಯಡಿ ಭತ್ತ ಮಾರಾಟ: ಗುರುತಿನ ಪತ್ರ ಪಡೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:31 IST
Last Updated 27 ನವೆಂಬರ್ 2020, 16:31 IST
ಚೇತನ್ ರಾಜ್ ಕಣ್ಣೂರ್
ಚೇತನ್ ರಾಜ್ ಕಣ್ಣೂರ್   

ಸಾಗರ: ‘ರಾಜ್ಯ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟ ಮಾಡಲು ಬಯಸುವ ರೈತರು ತಮ್ಮ ಭಾಗದ ರೈತ ಸಂಪರ್ಕ ಕೇಂದ್ರಗಳಿಂದ ಗುರುತಿನ ಪತ್ರ ಪಡೆಯುವುದು ಕಡ್ಡಾಯ’ ಎಂದು ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುರುತಿನ ಪತ್ರ ಪಡೆಯಲು ರೈತರು ತಮ್ಮ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿನೀಡಬೇಕು. ಗುರುತಿನ ಪತ್ರ ಪಡೆದ ನಂತರ ಆ ಕಾರ್ಡ್ ಪ್ರತಿಯ ಜೊತೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಎಪಿಎಂಸಿ ಆವರಣದಲ್ಲಿರುವ ಆಹಾರ ಇಲಾಖೆಯ ಉಗ್ರಾಣ ವಿಭಾಗಕ್ಕೆ ಸಲ್ಲಿಸಿ ಹೆಸರನ್ನು ನೋಂದಾಯಿಸಬೇಕು’ ಎಂದು ಮಾಹಿತಿ ನೀಡಿದರು.

ರೈತರು ತಮ್ಮ ಹೆಸರನ್ನು ನ.30ರಿಂದ ಡಿ.30 ರೊಳಗೆ ನೋಂದಣಿ ಮಾಡಿಸಬೇಕು. ಡಿ.20ರಿಂದ ಮಾರ್ಚ್ 20ರ ವರೆಗೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲಾಗುವುದು. ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‌ಗೆ ₹ 1,868, ‘ಎ’ ದರ್ಜೆ ಭತ್ತಕ್ಕೆ ₹ 1,888 ದರ ನಿಗದಿಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಠ 40 ಕ್ವಿಂಟಲ್‌ವರೆಗೂ ಭತ್ತವನ್ನು ಖರೀದಿಸಲಾಗುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಎಪಿಎಂಸಿಯಿಂದ ರೈತರಿಗೆ ಅಡಮಾನ ಸಾಲ ನೀಡಲು ₹ 2 ಕೋಟಿ ಮೀಸಲಿಡಲಾಗಿದೆ. ಒಬ್ಬ ರೈತನಿಗೆ ಗರಿಷ್ಠ ₹ 2 ಲಕ್ಷದವರೆಗೂ ಮೊದಲ ಮೂರು ತಿಂಗಳವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಇದರಿಂದ ರೈತರು ತಮ್ಮ ಫಸಲನ್ನು ಒಳ್ಳೆಯ ಬೆಲೆ ಬರುವವರೆಗೂ ಕಾದು ನಂತರ ಮಾರಾಟ ಮಾಡುವ ಅವಕಾಶ ಸಿಗುತ್ತದೆ ಎಂದು ತಿಳಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ರೈತರು ಮನೆ ಬಾಗಿಲಲ್ಲೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಲಭ್ಯವಾಗಿದೆ. ಕೆಲವು ವ್ಯಾಪಾರಸ್ಥರು ತೂಕದಲ್ಲಿ ಮೋಸ ಮಾಡುವ ಸಾಧ್ಯತೆ ಇರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ತೂಗಲು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಖರೀದಿಸುವುದು ಸೂಕ್ತ. ಒಬ್ಬರಿಗೆ ಇದು ದುಬಾರಿ ಎನಿಸಿದರೆ ಒಂದು ಗ್ರಾಮದ ಅಥವಾ ನಿರ್ದಿಷ್ಟ ಪ್ರದೇಶದ ರೈತರು ಒಟ್ಟಿಗೆ ಸೇರಿ ಖರೀದಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟಿಎಪಿಎಂಸಿಎಸ್ ಅಧ್ಯಕ್ಷ ಲೋಕನಾಥ ಬಿಳಿಸಿರಿ, ಬಿಜೆಪಿ ರೈತ ಮೋರ್ಚಾದ ಗ್ರಾಮಾಂತರ ಘಟಕದ ಅಧ್ಯಕ್ಷ ಗಿರೀಶ್
ಹಕ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.