ADVERTISEMENT

ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ

ನಗರ ಪಾಲಿಕೆ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 12:42 IST
Last Updated 29 ಜೂನ್ 2019, 12:42 IST
ಶಿವಮೊಗ್ಗ ನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಲತಾ ಗಣೇಶ್ ಮಾತನಾಡಿದರು.
ಶಿವಮೊಗ್ಗ ನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಲತಾ ಗಣೇಶ್ ಮಾತನಾಡಿದರು.   

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಲು ಸಂತಾನ ಹರಣ ಚಿಕಿತ್ಸೆ ಕೈಗೊಳ್ಳುವಂತೆ ಶನಿವಾರ ನಡೆದ ನಗರ ಪಾಲಿಕೆ ಸಾಮಾನ್ಯಸಭೆ ಒಪ್ಪಿಗೆ ಸೂಚಿಸಿತು.

ನಗರ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ನಾಯಿಗಳಿವೆ.ಸಂತಾನಹರಣಕ್ಕೆ ಒಳಪಡಿಸಲು ಒಂದು ಗಂಡು ನಾಯಿಗೆ ₨ 745, ಹಾಗೂ ಹೆಣ್ಣು ನಾಯಿಗೆ ₨ 1,315 ಖರ್ಚಾಗುತ್ತದೆ. ಒಟ್ಟು ₨ 30.90 ಲಕ್ಷ ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ವಿವರ ನೀಡಿದರು.

ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ವಿಘ್ನ:ಡಿವಿಎಸ್ ಕಾಲೇಜು ಬಳಿಯ ವೃತ್ತದಲ್ಲಿ ಸ್ಥಾಪಿಸಲು ನಿರ್ಧರಿಸಿರುವ ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಕಾನೂನು ತೊಡಕು ಎದುರಾಗಿದೆ. ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಯಾವುದೇ ಪುತ್ಥಳಿ ಸ್ಥಾಪಿಸಲು ಕೆಲವು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೆಲವು ತಿಂಗಳ ಹಿಂದೆಯೇ ಲಂಡನ್‌ನಿಂದ ಇಲ್ಲಿಗೆ ಪುತ್ಥಳಿ ಬಂದಿದೆ. ಅದನ್ನು ಸ್ಥಾಪಿಸುವ ಕುರಿತು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸರ್ಕಾರ ಪ್ರಸ್ತಾವ ತಿರಸ್ಕರಿಸಿತ್ತು. ಈಗ ಮತ್ತೆ ಪತ್ರ ಬರೆಯಲಾಗಿದೆ ಎಂದು ವಿಷಯ ಚರ್ಚೆಯಾಯಿತು.

ADVERTISEMENT

ಸಾಮಾನ್ಯ ಸಭೆಯ ಆರಂಭದಲ್ಲೇ ಈ ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಜ್ಞಾನೇಶ್ವರ್, ಸದಸ್ಯರಾದ ರಮೇಶ್ ಹೆಗ್ಡೆ, ನಾಗರಾಜ ಕಂಕಾರಿ, ಕೆ.ಶಂಕರ್, ಸುರೇಖಾ ಮತ್ತಿತರರು ಪುತ್ಥಳಿ ಸ್ಥಾಪನೆ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಎಚ್‌.ಸಿ.ಯೋಗೇಶ್ ಮಾತನಾಡಿ, ಪಾಲಿಕೆ ಬಜೆಟ್‌ನಲ್ಲೇ ಪುತ್ಥಳಿ ಸ್ಥಾಪನೆಗೆ ₨ 25 ಲಕ್ಷ ಮೀಸಲಿಡಲಾಗಿದೆ. ಪಾಲಿಕೆ ಈ ಕುರಿತು ಕ್ರಮ ವಹಿಸದಿದ್ದರೆ ಜನರಿಂದ ದೇಣಿಗೆ ಸಂಗ್ರಹಿಸಿ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೊನೆಗೆ ಒಂದು ತಿಂಗಳ ಒಳಗೆ ಪ್ರಕ್ರಿಯೆ ಆರಂಭಿಸುವುದಾಗಿಆಯುಕ್ತೆ ಚಾರುಲತಾ ಸೋಮಲ್‌ ಭರವಸೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಪ್ರತಿಧ್ವನಿ:ಕುಡಿಯುವ ನೀರಿನ ಸಮಸ್ಯೆ ಸಭೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು. ಶಂಕರ್ ಮತ್ತಿತರರು ಆಯುಕ್ತರು ಕರೆ ಸ್ವೀಕರಿಸುವುದಿಲ್ಲ. ಕಚೇರಿಯಲ್ಲಿ ಸರಿಯಾಗಿ ಇರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆಗ ಮಧ್ಯ ಪ್ರವೇಶಿಸಿದ ಎಚ್‌.ಸಿ.ಯೋಗೇಶ್, ನಾಗರಾಜ ಕಂಕಾರಿ, ರಮೇಶ್ ಹೆಗ್ಡೆ, ನಗರದ ಜನರು ಕುಡಿಯುವ ನೀರಿನ ಸಮಸ್ಯೆಗೆ ಸಿಲುಕಿದ್ದಾರೆ. ಈ ಕುರಿತು ಚರ್ಚಿಸದೆ ವೈಯಕ್ತಿಕ ವಿಚಾರಕ್ಕೆ ಸಭೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದು ಗದ್ದಲಕ್ಕೆ ಕಾರಣವಾಗಿ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲೇ ಒಂದು ತಾಸು ಕಳೆದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಿಗಡಾಯಿಸಲಿದೆ. ಮಳೆ ಕೈ ಕೊಟ್ಟಿದೆ. ಈ ಕುರಿತು ಪಾಲಿಕೆ ಯಾವ ರೀತಿ ಕ್ರಮಕೈಗೊಂಡಿದೆ ಎಂದು ಸಭೆಗೆ ತಿಳಿಸಬೇಕು. ಒಂದು ಲಕ್ಷ ಲಾಡು ಹಂಚುವ ಬಿಜೆಪಿ ಕುಡಿಯುವ ನೀರಿಗೂ ಆದ್ಯತೆ ನೀಡಬೇಕು ಎಂದು ಛೇಡಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಯಾವುದೊ ಹಳೆಯ ಫೋಟೊ ತೋರಿಸಿ, ತಪ್ಪು ಮಾಹಿತಿ ನೀಡಬೇಡಿ. ವಾಸ್ತವಾಂಶ ಅರಿತು ಮಾತನಾಡಿ ಎಂದು ತಾಕೀತು ಮಾಡಿದರು.

ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟು ಹೋಗಿತ್ತು. ಈಗ ಹಂತ ಹಂತವಾಗಿ ಸರಿಪಡಿಸುತ್ತಿದ್ದೇವೆ. ನೀವು ಮಾಡಿದ ಘನ ಕಾರ್ಯ ಇದು ಎಂದು ಕಾಂಗ್ರೆಸ್–ಜೆಡಿಎಸ್ ಸದಸ್ಯರನ್ನು ಚುಚ್ಚಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಪಾಲಿಕೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕಂದಾಯ ಇಲಾಖೆ ವ್ಯವಸ್ಥೆಯೇ ಕಟ್ಟು ಹೋಗಿದೆ. ಆಯಕ್ತರು ನಿಗಾವಹಿಸಬೇಕಿದೆ. ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಮಳೆಯ ಅಭಾವದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪಾಲಿಕೆ ಈಗಾಗಲೇ ಎರಡು ದಿನಕ್ಕೆ ಒಂದು ಬಾರಿ ಕುಡಿಯುವ ನೀರುಪೂರೈಸುತ್ತಿದೆ. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಗದ್ದಲ ಸೃಷ್ಟಿಸುವುದರಿಂದ ಅಧಿಕಾರಿಗಳು ಕೆಲಸ ಮಾಡದೆ ಕಾಲಹರಣ ಮಾಡುತ್ತಾರೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.