ADVERTISEMENT

ಹಂದಿಮುಕ್ತ ನಗರವಾಗಿಸಲು ಒಕ್ಕೊರಲ ಆಗ್ರಹ

ನಗರ ಪಾಲಿಕೆ: ಪ್ರಮುಖ ನಾಗರಿಕರ ಜತೆ ನಡೆದ ಬಜೆಟ್ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 12:15 IST
Last Updated 17 ಡಿಸೆಂಬರ್ 2018, 12:15 IST

ಶಿವಮೊಗ್ಗ: ಹಂದಿ ಮುಕ್ತ ನಗರವಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹಂದಿ ಸಾಕಣೆದಾರರಿಗೆ ನಗರದ ಹೊರವಲಯದಲ್ಲಿಸೂಕ್ತ ನಿವೇಶನ ನೀಡಿ, ಅಲ್ಲಿಗೆ ಸ್ಥಳಾಂತರಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಸಲಹೆ ನೀಡಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಬಜೆಟ್‌ ಕುರಿತು ಪ್ರಮುಖ ನಾಗರಿಕರ ಜತೆ ನಡೆದ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ಹೊರ ಭಾಗದಲ್ಲಿ ಜಾಗ ಪಡೆದು ಹಂದಿ ಸಾಕುವವರಿಗೆ ನೀಡುವ ಮೂಲಕ ನಗರದಲ್ಲಿ ಹಂದಿಗಳ ಸಾಕಲು ನಿರ್ಬಂಧ ಹಾಕುವಂತೆ ಸಲಹೆ ಕೇಳಿಬಂತು.

ADVERTISEMENT

ಹಂದಿಗಳ ಹಾವಳಿ ಪರಿಣಾಮ ನಗರದ ಸ್ವಚ್ಛತೆಗೆ ಧಕ್ಕೆಯಾಗಿದೆ. ಹಂದಿಗಳ ಉಪಟಳದಿಂದ ಹಲವು ಬಡಾವಣೆಗಳಲ್ಲಿ ಜನರಿಗೆ ನೆಮ್ಮದಿ ಇಲ್ಲವಾಗಿದೆ. ಸ್ಮಾರ್ಟ್‌ಸಿಟಿ ಸ್ಥಾನ ಪಡೆದಿದ್ದರೂಎಲ್ಲೆಡೆ ಗಲೀಜು ಇದೆ. ಮೊದಲು ಹಂದಿ ಮುಕ್ತ ನಗರವಾಗಿಸಬೇಕು. ಹಂದಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಾಮಾನ್ಯ ಸಭೆ ನಡೆಯದೆ ಎಂಟು ತಿಂಗಳು ಕಳೆದಿವೆ. ವಿವಿಧ ಬಡಾವಣೆಗಳಲ್ಲಿ ಹಲವು ಸಮಸ್ಯೆಗಳಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಕ್ಷಣ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾಲುವೆಗಳ ಮೇಲೆ ಕಟ್ಟಡ ನಿರ್ಮಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಟ್ಟಡಗಳನ್ನು ತೆರವುಗೊಳಿಸಬೇಕು. ಸಾಗರ ರಸ್ತೆ ಹಾಗೂ ಜೈಲ್ ರಸ್ತೆ, ಶಿವಮೊಗ್ಗ ಗ್ಯಾಸ್ ಏಜೆನ್ಸಿ ಹಿಂಭಾಗ ರಾಜಕಾಲುವೆ ಮೇಲೆ ಕಟ್ಟಡಗಳು ತಲೆ ಎತ್ತಿವೆ. ವಾಹನ ನಿಲುಗಡೆಗೆ ಕಾಯ್ದಿರಿಸಿದ್ದ ಜಾಗ ಅನ್ಯ ಉದ್ದೇಶ ಬಳಕೆ ಮಾಡಲಾಗಿದೆ. ಮ್ಯಾಕ್ಸ್ ಆಸ್ಪತ್ರೆ, ವಾತ್ಸಲ್ಯ ಆಸ್ಪತ್ರೆ ಬಳಿ ನಿಲ್ದಾಣಗಳಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಕಾಲಮಿತಿ ಒಳಗೆ ಪರಿಹಾರ ಕಂಡುಕೊಳ್ಳಬೇಕು. ಪ್ಲಾಸ್ಟಿಕ್ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕೆಲವು ವಾರ್ಡ್‌ಗಳಲ್ಲಿ ಪೌರನೌಕರರು ವಾರಕ್ಕೆ ಒಮ್ಮೆ ಮಾತ್ರ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಬೀದಿ ದೀಪಗಳು ಹಾಳಾದರೆ ತಿಂಗಳಾದರೂ ಸರಿಪಡಿಸುವುದಿಲ್ಲ. ಹಲವು ಬಡಾವಣೆಗಳಲ್ಲಿ ರಸ್ತೆಗಳು ಹಾಳಾಗಿದ್ದರೂ ದುರಸ್ತೆ ಕಾರ್ಯ ಕೈಗೊಂಡಿಲ್ಲ. ಮೂಲ ಸೌಲಭ್ಯ ಒದಗಿಸಿಲ್ಲ ಎಂದು ದೂರಿದರು.

ನಾಗರಿಕರ ಸಲಹೆ, ಸಹಕಾರಕ್ಕೆ ಕರೆಯಲಾದ ಸಭೆಯಲ್ಲಿ ಆಯುಕ್ತರೂ ಸೇರಿದಂತೆ ಪ್ರಮುಖ ಅಧಿಕಾರಿಗಳ ಗೈರು ಹಾಜರಿಗೆ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಅಧ್ಯಕ್ಷ ವಸಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಗಾಂಧಿ ಬಜಾರ್‌ನ ತಳ್ಳುವಗಾಡಿಗಳನ್ನು ವೀರಶೈವ ಕಲ್ಯಾಣ ಮಂದಿರ ರಸ್ತೆಗೆ ಸ್ಥಳಾಂತರ ಮಾಡಲಾಗಿದೆ. ಇದರಿಂದ ಹಲವು ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಡಬ್ಬಲ್ ರಸ್ತೆ, ಅಂಡರ್ ಪಾಸ್ ಅಥವಾ ವೆಂಕಟೇಶ್ವರ ಸ್ವೀಟ್‌ಹೌಸ್ ಪಕ್ಕದ ಜಾಗದಲ್ಲಿ ಹಣ್ಣು, ತರಕಾರಿ ಗಾಡಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಉಪ ಮೇಯರ್ ಎಸ್‌.ಎನ್‌. ಚನ್ನಬಸಪ್ಪ ಕೋರಿದರು.

ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಅಶೋಕ್‌ಕುಮಾರ್, ಕಾಂತೇಶ್ ಕದರ ಮಂಡಲಗಿ, ಎಸ್.ಟಿ. ನಾಯಕ್, ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಪಾಲಿಕೆ ಮೇಯರ್ ಲತಾಗಣೇಶ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.