ADVERTISEMENT

ಅಜೆಂಡಾಗೆ ನುಸುಳಿದ ವಿಷಯದ ತನಿಖೆಗೆ ಐವರ ಸಮಿತಿ

ಬ್ಯಾರೀಸ್‌ ಸಿಟಿ ಸೆಂಟರ್‌ ಗುತ್ತಿಗೆ ಅವಧಿ ಚರ್ಚೆಗೆ ಪಾಲಿಕೆ ಸಾಮಾನ್ಯ ಸಭೆಯ ಸಮಯ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 13:00 IST
Last Updated 12 ಏಪ್ರಿಲ್ 2021, 13:00 IST
ಶಿವಮೊಗ್ಗ ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪರಿಷತ್ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.
ಶಿವಮೊಗ್ಗ ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪರಿಷತ್ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.   

ಶಿವಮೊಗ್ಗ: ಬ್ಯಾರೀಸ್‌ ಸಿಟಿ ಸೆಂಟರ್‌ ವಾಣಿಜ್ಯ ಸಂಕೀರ್ಣದ ಗುತ್ತಿಗೆ ಅವಧಿಯನ್ನು 99 ವರ್ಷಗಳಿಗೆ ವಿಸ್ತರಿಸುವ ಪ್ರಸ್ತಾವವನ್ನು ಅಜೆಂಡಾಗೆ ಸೇರಿದ ಪ್ರಕರಣದ ತನಿಖೆ ನಡೆಸಲು ಐವರು ಸದಸ್ಯರನ್ನು ಒಳಗೊಂಡ ಸರ್ವ ಪಕ್ಷಗಳ ಸಮಿತಿ ರಚಿಸಿ ಸೋಮವಾರ ನಡೆದ ನಗರ ಪಾಲಿಕೆ ಸಾಮಾನ್ಯ ಸಭೆ ನಿರ್ಣಯ ಅಂಗೀಕರಿಸಿತು.

ಬಿಜೆಪಿ, ಕಾಂಗ್ರೆಸ್‌ನ ತಲಾ ಇಬ್ಬರು ಹಾಗೂ ಜೆಡಿಎಸ್‌ನ ಒಬ್ಬರನ್ನು ಒಳಗೊಂಡ ಸಮಿತಿ ರಚಿಸಲು ಸಾಮಾನ್ಯ ಸಭೆ ಒಮ್ಮತದ ನಿರ್ಧಾರ ತೆಗೆದುಕೊಂಡಿತು. ಈ ಸಮಿತಿ ಎರಡು ತಿಂಗಳ ಒಳಗೆ ವರದಿ ನೀಡಬೇಕು. ತಮ್ಮ ಅನುಮತಿ ಇಲ್ಲದೆ ಯಾವುದೇ ವಿಷಯ ಸಭೆಯ ಅಜೆಂಡಾದಲ್ಲಿ ಸೇರಿಸುವಂತಿಲ್ಲ ಎಂದು ಮೇಯರ್ ಸುನೀತಾ ಅಣ್ಣಪ್ಪ ರೂಲಿಂಗ್ ನೀಡಿದರು.

ಅಮೀರ್ ಅಹಮದ್‌ ವೃತ್ತದಲ್ಲಿ ನೆಹರು ರಸ್ತೆ, ಬಿ.ಎಚ್.ರಸ್ತೆಗಳಿಗೆ ಹೊಂದಿಕೊಂಡಿರುವ ಈ ವಾಣಿಜ್ಯ ಸಂಕೀರ್ಣದ ಗುತ್ತಿಗೆ ಅವಧಿ ಇನ್ನೂ 20 ವರ್ಷಗಳು ಇರುವಾಗಲೇ 99 ವರ್ಷಗಳಿಗೆ ವಿಸ್ತರಿಸುವ ಪ್ರಸ್ತಾವ ನಗರ ಪಾಲಿಕೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಸೇರಿಸಲಾಗಿತ್ತು. ಹೀಗೆ ಸೇರಿಸಿದ ವಿಷಯ ಪಾಲಿಕೆ ಮೇಯರ್, ಆಯುಕ್ತರ ಗಮನಕ್ಕೆ ಬಂದಿರಲಿಲ್ಲ ಎಂಬ ವಿಷಯ ಚರ್ಚೆಗೆ ನಾಂದಿ ಹಾಡಿತ್ತು.

ADVERTISEMENT

ಅರ್ಧ ದಿನದ ಕಲಾಪ ವ್ಯರ್ಥ:

ವಾಣಿಜ್ಯ ಸಂಕೀರ್ಣದ ಗುತ್ತಿಗೆ ಅವಧಿ ವಿಸ್ತರಣೆ ಅಜೆಂಡಾದಲ್ಲಿ ಸೇರಿದ ವಿಷಯ ಇಟ್ಟುಕೊಂಡು ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಅರ್ಧ ದಿನದ ಸಮಯ ವ್ಯರ್ಥ ಮಾಡಿದರು. ಅದೊಂದೇ ವಿಚಾರಕ್ಕೆ ಗದ್ದಲ, ಗಲಾಟೆ, ಆರೋಪ–ಪ್ರತ್ಯಾರೋಪಗಳಿಗೆ ಪಾಲಿಕೆ ಸಾಕ್ಷಿಯಾಯಿತು. ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ವಿಷಯ ಪ್ರಸ್ತಾಪಿಸಿದರು.

ಪ್ರತಿಕ್ರಿಯೆ ನೀಡಿದ ಆಯುಕ್ತ ಚಿದಾನಂದ ವಟಾರೆ, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಕೆಳಹಂತದ ಅಧಿಕಾರಿಗಳ ಕಣ್ತಪ್ಪಿನಿಂದ ಹೀಗಾಗಿದೆ. ಈ ವಿಷಯ ಅಜೆಂಡಾದಿಂದ ಕೈ ಬಿಡಲಾಗುವುದು ಎಂದರೆ, ಮೇಯರ್ ಸುನೀತಾ ಅಣ್ಣಪ್ಪ ಸಹ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರದಿಂದ ಮತ್ತಷ್ಟು ಆಕ್ರೋಶಗೊಂಡ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಕಾಂಗ್ರೆಸ್ ಸದಸ್ಯರಾದ ರಮೇಶ್ ಹೆಗ್ಡೆ, ಎಚ್‌.ಸಿ.ಯೋಗೀಶ್, ರೇಖಾ ರಂಗನಾಥ್, ಆರ್.ಸಿ.ನಾಯ್ಕ, ಜೆಡಿಎಸ್‌ ಸದಸ್ಯ ನಾಗರಾಜ ಕಂಕಾರಿ, ಇದು ಬೇಜವಾಬ್ದಾರಿ ಹೇಳಿಕೆ. ಮೇಯರ್, ಆಯುಕ್ತರ ಗಮನಕ್ಕೆ ಬಾರದೆ ಅಜೆಂಡಾದಲ್ಲಿ ವಿಷಯ ಸೇರಲು ಹೇಗೆ ಸಾಧ್ಯ? ಪಾಲಿಕೆ ಸಮಾನ್ಯ ಸಭೆಯ ಅಜೆಂಡಾದಲ್ಲಿ ಒಮ್ಮೆ ಸೇರಿದರೆ ನಿಯಮದ ಪ್ರಕಾರ ಚರ್ಚೆಯಾಗಬೇಕು. ಇದು ನಗರಸಭೆಯ ಬಹು ಮುಖ್ಯ ಆಸ್ತಿಯ ವಿಚಾರ. ಅವರ ಗುತ್ತಿಗೆ ಅವಧಿ ಅವಧಿ ಮುಗಿಯುವ ಎರಡು ದಶಕ ಮೊದಲೇ ಹೇಗೆ ಮನವಿ ಮಾಡಿದರು? ಈ ವಿಷಯ ಹೇಗೆ ಚರ್ಚೆಗೆ ಸೇರಿಸಲಾಯಿತು?ವಿಷಯ ಸೇರ್ಪಡೆಯ ಹಿಂದೆ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಸರ್ಕಾರ ಆಯುಕ್ತರನ್ನು ನೇಮಕ ಮಾಡುವುದೇ ಪಾಲಿಕೆ ಆಡಳಿತ ಕಾನೂನಿನ ಪ್ರಕಾರ ನಡೆಸಲು. ಆದರೆ, ಅಧಿಕಾರಿಗಳೇ ಕಾನೂನು ಉಲ್ಲಂಘಿಸಿದರೆ ಹೇಗೆ? ನಿಮ್ಮ ಗಮನಕ್ಕೆ ಬಾರದೆ ಅಜೆಂಡಾದಲ್ಲಿ ಒಂದು ವಿಷಯ ಸೇರಲು ಸಾಧ್ಯವೇ? ಹಾಗಾದರೆ ಪಾಲಿಕೆಗೆ ನಿಮ್ಮ ಆವಶ್ಯಕತೆ ಏಕೆ ಬೇಕು? ನಿಮ್ಮ ಕೈಕೆಳಗಿನ ಸಣ್ಣ ಅಧಿಕಾರಿಗೆ ನೋಟಿಸ್ ಕೊಟ್ಟು ಕೈ ತೊಳೆದುಕೊಳ್ಳುವ ಕೆಲಸ ಮಾಡಬೇಡಿ. ಇದರ ಹಿಂದಿರುವವರ ಹೆಸರು ಬಹಿರಂಗಪಡಿಸಬೇಕು ಎಂದು ರೇಗಿದರು.

ಸದಸ್ಯ ಯೋಗೀಶ್,ನಾಗರಾಜ್ ಕಂಕಾರಿ ಮಾತನಾಡಿ, ₹ 1.16 ಕೋಟಿ ಬಾಡಿಗೆ ಬಾಕಿ ಇದೆ. ಏಕೆ ಕಟ್ಟಿಸಿಕೊಂಡಿಲ್ಲ. ಇದರ ಹಿಂದೆ ರಾಜಕಾರಣಿಗಳು ಇದ್ದರೆ ತಿಳಿಸಿಬಿಡಿ ಎಂದು ಕುಟುಕಿದರು.

ಬಿಜೆಪಿ ಸದಸ್ಯ ಎಸ್‌.ಎನ್‌.ಚನ್ನಬಸಪ್ಪ,ಸಣ್ಣ ವಿಷಯ ಇಟ್ಟುಕೊಂಡು ಇಷ್ಟು ದೊಡ್ಡ ಗಲಾಟೆ ಮಾಡುವ ಆವಶ್ಯಕತೆ ಇಲ್ಲ ಎಂದು ಎಲ್ಲರನ್ನೂ ಸಮಾಧಾನ ಪಡಿಸಲು ಮುಂದಾದಾಗ ಸದಸ್ಯರ ಆಕ್ರೋಶ ಹೆಚ್ಚಾಯಿತು. ನೀವು ಮೇಯರ್ ಪರ, ಅಧಿಕಾರಿಗಳ ಪರ ಏಕೆ ಮಾತನಾಡುತ್ತಿರಿ ಎಂದು ತರಾಟೆಗೆ ತೆಗೆದುಕೊಂಡರು.ಇದರಿಂದ ಸಿಟ್ಟಿಗೆದ್ದ ಆರ್.ಪ್ರಸನ್ನ ಕುಮಾರ್ ಇದು ಸಣ್ಣ ವಿಷಯವೆ? ಇದಕ್ಕೆ ನೀವು ಸಹಕಾರ ಕೊಡುತ್ತೀರಾ? ಕೆಳ ಹಂತದ ಅಧಿಕಾರಿ ಒಬ್ಬರೇ ಮಾಡಲು ಸಾಧ್ಯವೇ? ಅಷ್ಟೊಂದು ಶಕ್ತಿ ಅವರಿಗಿದಿಯಾ? ಈ ವಿಷಯ ಮೇಯರ್‌ಗೂ ಅವಮಾನ ಮಾಡಿದಂತೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.