ಶಿವಮೊಗ್ಗ: 23 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಅದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ನೌಕರರು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬೇರೆ ಇಲಾಖೆಯ ಸಿಬ್ಬಂದಿಯನ್ನು ಗ್ರಾಮ ಪಂಚಾಯಿತಿಯ ನೌಕರರನ್ನಾಗಿ ಪರಿಗಣಿಸಬಾರದು. ₹31,000 ವೇತನ ನಿಗದಿ ಮಾಡಬೇಕು. ಮಧ್ಯಂತರ ಪರಿಹಾರವಾಗಿ ಪ್ರತಿ ತಿಂಗಳು ₹3,000 ಹೆಚ್ಚುವರಿ ನೀಡಬೇಕು. ಗ್ರಾಮ ಪಂಚಾಯಿತಿ ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ ಪ್ರತಿ ತಿಂಗಳು ₹6,000 ಪಿಂಚಣಿ ಕೊಡುವ ವ್ಯವಸ್ಥೆ ಜಾರಿಗೆ ತರಬೇಕು. ಸ್ವಚ್ಛವಾಹಿನಿಯಲ್ಲಿ ತರಬೇತಿ ಪಡೆದ ಎಲ್ಲರಿಗೂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
15ನೇ ಹಣಕಾಸಿನ ಆಯೋಗದ ಮಾರ್ಗಸೂಚಿಯಂತೆ ವೇತನ ಪಾವತಿಸಬೇಕು. ಕರವಸೂಲಿಕಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ದೂರುಗಂಟಿ, ಜವಾನ, ಸ್ವಚ್ಛತಾಗಾರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ವರ್ಗಾವಣೆಗೆ ಅವಕಾಶ ನೀಡಬೇಕು. ಅವರಿಗೆ ನಿರ್ದಿಷ್ಟ ಕೆಲಸಗಳನ್ನು ನಿಗದಿಪಡಿಸಬೇಕು. ಲೆಕ್ಕ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಯಿತು.
ಸಮಿತಿಯ ಅಧ್ಯಕ್ಷ ಬಂಗಾರಪ್ಪ, ಕಾರ್ಯದರ್ಶಿ ಪರಮೇಶ್, ಪ್ರಮುಖರಾದ ಸಂತೋಷ್, ನಾಗೇಶ್, ಚನ್ನಬಸಪ್ಪ, ಉಮೇಶ್, ಸ್ವಾಮಿ, ರಂಗಸ್ವಾಮಿ, ಲಿಂಗರಾಜ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.