ADVERTISEMENT

ಪಟಗುಪ್ಪ ಸೇತುವೆ: ದಶಕಗಳ ಕನಸು ನನಸು

560 ಮೀಟರ್ ಉದ್ದದ ಸೇತುವೆ ಲೋಕಾರ್ಪಣೆ ಇಂದು; ಹಿನ್ನೀರ ಹಬ್ಬ, ಮನರಂಜನೆ ಕಾರ್ಯಕ್ರಮಗಳು

ರವಿ ನಾಗರಕೊಡಿಗೆ
Published 2 ಮಾರ್ಚ್ 2021, 3:54 IST
Last Updated 2 ಮಾರ್ಚ್ 2021, 3:54 IST
ಲೋಕಾರ್ಪಣೆಗೆ ಸಿದ್ಧಗೊಂಡಿರುವ ಹೊಸನಗರ ತಾಲ್ಲೂಕಿನ ಪಟಗುಪ್ಪ ಸೇತುವೆ
ಲೋಕಾರ್ಪಣೆಗೆ ಸಿದ್ಧಗೊಂಡಿರುವ ಹೊಸನಗರ ತಾಲ್ಲೂಕಿನ ಪಟಗುಪ್ಪ ಸೇತುವೆ   

ಪಟಗುಪ್ಪ (ಹೊಸನಗರ): ‘ನಮ್ಮೂರ ಹುಡುಗನಿಗೆ ಬುದ್ಧಿ ಬರುವುದೂ ಒಂದೇ, ಪಟಗುಪ್ಪ ಸೇತುವೆ ಆಗುವುದೂ ಒಂದೇ’ ಎಂಬ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಐದಾರು ದಶಕಗಳ ಕಾಲ ಸಂಪರ್ಕ ಸೇತುವೆಯ ಕನಸು ಕಂಡ ಜನರು ಈ ಮಾತನ್ನು ಹೇಳುತ್ತಿದ್ದರು. ಆದರೆ ಈಗ ಈ ಮಾತು ಸುಳ್ಳಾಗಿದೆ. ಪಟಗುಪ್ಪ ಸೇತುವೆ ಮಾ. 2ರಂದು ಲೋಕಾರ್ಪಣೆಗೊಳ್ಳಲಿದೆ.

ಸಾಗರ-ಹೊಸನಗರ ತಾಲ್ಲೂಕುಗಳ ಸಂಪರ್ಕ ಬೆಸೆಯುವ ಪಟಗುಪ್ಪ ಸೇತುವೆ ನಿರ್ಮಾಣ ಕಾಮಗಾರಿ ಮುಗಿದಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ನಾಲ್ಕಾರು ಅಣೆಕಟ್ಟುಗಳ ನಿರ್ಮಾಣದಿಂದ ಹೊಸನಗರ ತಾಲ್ಲೂಕು ಮುಳುಗಡೆ ಪ್ರದೇಶವಾಗಿತ್ತು. ಎತ್ತ ನೋಡಿದರೂ ಮುಳುಗಡೆ ಹಿನ್ನೀರು ಕಾಣುವಂತಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಹತ್ತಿರ ಪ್ರದೇಶಕ್ಕೂ ಹತ್ತಾರು ಕಿ.ಮೀ ಸುತ್ತಿ ಹೋಗಬೇಕಾಯಿತು. ಜನರು ಸಂಪರ್ಕ ಸೇತುವಿನ ಕನಸು ಕಂಡು ನಿರಾಶರಾಗಿದ್ದರು.

ADVERTISEMENT

ಸೇತುವೆಗಾಗಿ ದಶಕಗಳಿಂದ ಈ ಭಾಗದ ಜನರು ಒತ್ತಾಯಿಸಿದ ಪರಿಣಾಮಸರ್ಕಾರ 2007ರಲ್ಲಿ ಸೇತುವೆಗೆ ಅಡಿಗಲ್ಲು ಹಾಕಿತ್ತು. ₹ 8 ಕೋಟಿ ಅನುದಾನದಲ್ಲಿ ಆರಂಭವಾದ ಸೇತುವೆ ಕಾಮಗಾರಿ ಹಲವು ಬಾರಿ ನನೆಗುದಿಗೆ ಬಿದ್ದು, ₹ 56 ಕೋಟಿ ವೆಚ್ಚದಲ್ಲಿ 13 ವರ್ಷಗಳ ಕಾಲ ಕಾಮಗಾರಿ ನಡೆಯಿತು.

ಪಟಗುಪ್ಪ ಸೇತುವೆ
ಯಿಂದ ಸಾಗರ ತಾಲ್ಲೂಕಿನ ಸಂಪರ್ಕ ಸುಲಭವಾಗಿತ್ತು. ಇದೀಗ ಸಂಚಾರಕ್ಕೆ ಮುಕ್ತವಾಗಿರುವುದು ತಾಲ್ಲೂಕಿನ ಜನರಲ್ಲಿ ಹರ್ಷ
ಮೂಡಿಸಿದೆ.

ಸಿಗಂದೂರು ಹತ್ತಿರ: ರಾಜ್ಯದ ಪ್ರಸಿದ್ಧ ಯಾತ್ರ ಸ್ಥಳವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಈ ಪಟಗುಪ್ಪ ಸೇತುವೆ ಹತ್ತಿರದ ಮಾರ್ಗ. ದೂರದಿಂದ ಬರುವ ಯಾತ್ರಿಗಳು ಈ
ಸೇತುವೆ ಬಳಸಿ ಹೋದರೆ ಸಿಗಂದೂರನ್ನು ಬಹಳ ಬೇಗ ತಲುಪಬಹುದಾಗಿದೆ. ಸೇತುವೆಯಿಂದ ಹೊಸ
ನಗರದಿಂದ ಸಾಗರ 8 ಕಿ.ಮೀ. ಹತ್ತಿರವಾಗಿದೆ.

560 ಮೀಟರ್ ಉದ್ದದ ಸೇತು: ಸೇತುವೆ ಬರೋಬ್ಬರಿ ಅರ್ಧ ಕಿಲೋಮೀಟರ್ ಉದ್ದವಿದೆ. 560 ಮೀಟರ್ ಉದ್ದ ಇರುವ ಸೇತುವೆಯನ್ನು 13 ಪಿಲ್ಲರ್ ಮತ್ತು 10 ಸ್ಪಾನ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ಹೊಸನಗರದಿಂದ ಕಾಳಿಕಪುರ, ಸಂಕೂರು, ಮಸಗಲ್ಲಿ ಮೂಲಕ ಪಟಗುಪ್ಪ ಸೇತುವೆ ಬಳಸಿ ಸಾಗುವ ನೂತನ ಮಾರ್ಗವಾಗಿದೆ. ಹುಲಿದೇವರಬನ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಸೇರ್ಪಡೆಗೊಳ್ಳಲಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಸಂಪರ್ಕಕ್ಕೆ ಈ ಸೇತುವೆ ಹೊಸ ಮಾರ್ಗವಾಗಿದೆ.

ಮಾರ್ಚ್ 2ರಂದು ರಾತ್ರಿ 7ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.