ADVERTISEMENT

ಪ.ಪಂ. ಸದಸ್ಯರು ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಬಹುದೇ?

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 6:16 IST
Last Updated 9 ಆಗಸ್ಟ್ 2024, 6:16 IST
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನವೀದ್
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನವೀದ್   

ಶಿರಾಳಕೊಪ್ಪ (ಶಿವಮೊಗ್ಗ ಜಿಲ್ಲೆ): ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ವಾರ್ಡ್‌ ಚುನಾವಣೆ ನಡೆಸದೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಮೀಸಲಾತಿ ಪ್ರಕಟಿಸಿದೆ. ಇದರ ಅನ್ವಯ ಪುರಸಭೆ ಆಡಳಿತ ಮಂಡಳಿಗೆ ಸರ್ಕಾರ ಚುನಾವಣೆ ನಡೆಸಬಹುದೇ ಎನ್ನುವ ಪ್ರಶ್ನೆ ಸದಸ್ಯರಲ್ಲಿ ಮೂಡಿದೆ.

ಮೇಲ್ದರ್ಜೆಗೆ ಏರಿರುವ ಸ್ಥಳೀಯ ಸಂಸ್ಥೆಗಳ ಮಧ್ಯಂತರ ಕೌನ್ಸಿಲ್‌ ರಚಿಸುವ ಬಗ್ಗೆ ಕರ್ನಾಟಕ ಪುರಸಭೆ ಕಾಯ್ದೆ– 1964ರ ಸೆಕ್ಷನ್‌ 358ರ ಅಡಿಯಲ್ಲಿ ವಿವರಿಸಲಾಗಿದೆ. ಅದರ ಅನ್ವಯ ಮೇಲ್ದರ್ಜೆಗೆ ಏರಿಸಲಾದ ಸ್ಥಳೀಯ ಸಂಸ್ಥೆಯ ಕೌನ್ಸಿಲ್‌ ರಚನೆಯಾದ ದಿನದಿಂದ 6 ತಿಂಗಳ ಒಳಗಾಗಿ ನೂತನ ವಾರ್ಡ್‌ಗಳನ್ನು ರಚಿಸಿ, ಹೊಸ ಕೌನ್ಸಿಲ್‌ ಬಾಡಿಯನ್ನು ರಚಿಸಬೇಕು. ಅಲ್ಲಿಯವರೆಗೂ ಹಿಂದಿನ ಸದಸ್ಯರನ್ನೇ ಮಧ್ಯಂತರ ಕೌನ್ಸಿಲ್‌ಗೆ ಸದಸ್ಯರನ್ನಾಗಿ ಮುಂದುವರಿಸಬಹುದು ಎಂದು ತಿಳಿಸಲಾಗಿದೆ.

ಹಿಂದೆ ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದ ಸದಸ್ಯರು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಇದೇ ಕೌನ್ಸಿಲ್‌ ಪುರಸಭೆಯ ಮಧ್ಯಂತರ ಕೌನ್ಸಿಲ್‌ ಆಗಿ ಕಾರ್ಯ ನಿರ್ವಹಿಸಿದೆ. 2.5 ವರ್ಷದ ಮೊದಲಾರ್ಧ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಾಗಿತ್ತು. ಹಾಗಾಗಿ, 15 ತಿಂಗಳಿಂದ ಆಡಳಿತಾಧಿಕಾರಿ ನೇತೃತ್ವದಲ್ಲಿ ಪುರಸಭೆ ಕೆಲಸ ನಿರ್ವಹಿಸುತ್ತಿದೆ.

ADVERTISEMENT

ಈಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದ್ದು, ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದ ಸದಸ್ಯರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಗಿ, ಆಡಳಿತದ ಚುಕ್ಕಾಣಿ ಹಿಡಿಯಬಹುದೇ ಎಂಬ ಗೊಂದಲ ಮೂಡಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಾಗಿದೆ.

ಈ ಗೊಂದಲವು ಜಿಲ್ಲೆಯ ಸೊರಬ, ಶಿರಾಳಕೊಪ್ಪ ಸೇರಿ ಮೇಲ್ದರ್ಜೆಗೆ ಏರಿಸಲಾಗಿದ್ದ ರಾಜ್ಯದ 40ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳನ್ನು ಕಾಡುತ್ತಿದೆ. ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿ 4 ವರ್ಷಗಳು ಕಳೆದರೂ ಇನ್ನೂ ಸರ್ಕಾರ ಹೊಸ ವಾರ್ಡ್‌ ಚುನಾವಣೆ ನಡೆಸಿಲ್ಲ. ಕಳೆದ ಸೋಮವಾರವಷ್ಟೇ ಸರ್ಕಾರ 123 ಪುರಸಭೆಗಳ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸಿದೆ. ಹಳೆಯ ಪಂಚಾಯಿತಿಗೂ ಹಾಗೂ ಪರಿವರ್ತಿತ ಪಂಚಾಯಿತಿ ವಾರ್ಡ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇದೆ.

ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗೆ 17 ಸದಸ್ಯರು ಇದ್ದರು. ಅವರ ಪೈಕಿ ಒಬ್ಬ ಸದಸ್ಯ ಮೃತಪಟ್ಟಿದ್ದಾರೆ. ಸದಸ್ಯರು ನಿಧನರಾಗಿ 6 ತಿಂಗಳು ಕಳೆದರೂ ಉಪಚುನಾವಣೆ ನಡೆದಿಲ್ಲ. ಆ ವಾರ್ಡ್‌ಗೆ ಚುನಾವಣೆ ನಡೆಸಲು ಸರ್ಕಾರ ಮುಂದಾದರೂ ಆ ವಾರ್ಡ್ ‌ಈಗ ಅಸ್ತಿತ್ವದಲ್ಲಿ ಇಲ್ಲ. ಕಾರಣ, ಈಗಾಗಲೇ ಶಿರಾಳಕೊಪ್ಪ ಪುರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳನ್ನು ರಚಿಸಿ ಸರ್ಕಾರ ಗೆಜೆಟ್‌ ನೋಟಿಫಿಕೇಶ್ ಹೊರಡಿಸಿದೆ. ಹಾಗಾಗಿ, ಹಿಂದಿನ ಪಟ್ಟಣ ಪಂಚಾಯಿತಿ ವಾರ್ಡ್‌ಗಳು ಈಗ ಅಸ್ತಿತ್ವದಲ್ಲಿ ಇಲ್ಲ.

‘ಈಗಾಗಲೇ ಅಧಿಕಾರಿಗಳು ಕರ್ನಾಟಕ ಪುರಸಭೆ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ವಾರ್ಡ್‌ಗಳ ಅಸ್ತಿತ್ವವೇ ಹೋದ ಮೇಲೆ ಅಲ್ಲಿಂದ ಆಯ್ಕೆಯಾದ ಸದಸ್ಯರು ಮುಂದುವರಿಯಲು ಸಾಧ್ಯವೇ?’ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನವೀದ್ ಪ್ರಶ್ನಿಸುತ್ತಾರೆ.

ಪುರಸಭೆಗೆ ನೂತನವಾಗಿ ಸೇರ್ಪಡೆಯಾಗಿರುವ ತಡಗಣಿ, ಬೆಲವಂತನಕೊಪ್ಪ, ಕ್ಯಾದಿಕೊಪ್ಪ ಗ್ರಾಮದಿಂದ ಚುನಾಯಿತ ಪ್ರತಿನಿಧಿಗಳು ಆಯ್ಕೆ ಆಗಿಲ್ಲ. ಹಾಗಾಗಿ, ವಾರ್ಡ್ ಚುನಾವಣೆ ನಡಸದೇ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸುವುದು ಈ ಭಾಗದ ಜನರ ಹಕ್ಕನ್ನು ಕಸಿದುಕೊಂಡಂತೆ ಎಂದು ಬೆಲವಂತನಕೊಪ‌್ಪದ ಮಹೇಂದ್ರಪ್ಪ  ದೂರಿದ್ದಾರೆ.

ಶಿರಾಳಕೊಪ್ಪ ಪುರಸಭೆ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.