ಶಿವಮೊಗ್ಗ: ಪಿಇಎಸ್ ಟ್ರಸ್ಟ್ ಅಂಗಸಂಸ್ಥೆ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ರಚಿಸಿರುವ ಅನ್ವೇಷಣಾ ನಾವಿನ್ಯತೆ ಮತ್ತು ಉದ್ಯಮಶೀಲತಾ ವೇದಿಕೆಯನ್ನು ಸರ್ಕಾರದ ಪ್ರಮುಖ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್ (ಟಿಬಿಐ) 2.0 ಮಿಷನ್ ಅಡಿ ಆಯ್ಕೆ ಮಾಡಿದ್ದು, ಸಂಸ್ಥೆಗೆ ಸರ್ಕಾರ ₹10 ಕೋಟಿ ಹಣಕಾಸಿನ ಬೆಂಬಲ ಘೋಷಿಸಿದೆ.
ಇದು ಶ್ರೇಣಿ– 2 ಮತ್ತು ಶ್ರೇಣಿ– 3ರ ಪ್ರದೇಶಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ ವೇಗಗೊಳಿಸುವ ಗುರಿ ಹೊಂದಿದ್ದು, ಬೆಂಗಳೂರಿನಿಂದ ಆಚೆಗಿರುವ ಪ್ರದೇಶಗಳ ಅಭಿವೃದ್ಧಿಯ ಉಪಕ್ರಮದ ಭಾಗವಾಗಿ ತಳಮಟ್ಟದ ಉದ್ಯಮಶೀಲತೆ ಬೆಳೆಸುವ ಮೂಲಕ ನಾವೀನ್ಯತೆ ಪರಿಸರ ವ್ಯವಸ್ಥೆ ವಿಕೇಂದ್ರೀಕರಿಸಲು ಈ ಯೋಜನೆ ರೂಪಿಸಲಾಗಿದೆ.
ಅನ್ವೇಷಣಾ ಟಿಬಿಐ ಕೃಷಿ ತಂತ್ರಜ್ಞಾನ, ಪ್ರವಾಸೋದ್ಯಮ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಸೇರಿದಂತೆ ಮಲೆನಾಡು ಭಾಗಕ್ಕೆ ಅವಿಭಾಜ್ಯವಾಗಿ ಹೊರಹೊಮ್ಮುತ್ತಿರುವ ಉದಯೋನ್ಮುಖ ವಲಯಗಳ ಮೇಲೆ ಕೇಂದ್ರೀಕರಣಗೊಂಡಿದೆ.
ಮಲೆನಾಡು ಭಾಗದಲ್ಲಿ ಅನ್ವೇಷಣಾ ಸಂಸ್ಥೆಯು ಶೈಕ್ಷಣಿಕ ಸಂಸ್ಥೆ, ಸರ್ಕಾರಿ ಸಂಸ್ಥೆ, ಉದ್ಯಮ ತಜ್ಞರು ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ನಿಕಟ ಸಂಪರ್ಕ ಮತ್ತು ಸಹಕಾರದೊಂದಿಗೆ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತಿದೆ. ₹ 10 ಕೋಟಿ ಅನುದಾನವು ಸುಧಾರಿತ ಮೂಲ ಸೌಕರ್ಯ, ಡೊಮೇನ್ ಪರಿಣತಿ ಮತ್ತು ಮೂಲ ಮಾದರಿ ಸಾಮರ್ಥ್ಯ ವಿಸ್ತರಿಸುವ ಮೂಲಕ ಹೆಚ್ಚಿನ ನಾವೀನ್ಯಕಾರರು ಮತ್ತು ನವೋದ್ಯಮಗಳನ್ನು ಬೆಂಬಲಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ.
ರಾಜ್ಯ ಸರ್ಕಾರದ ಐಟಿ–ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾರ್ಗದರ್ಶನದಲ್ಲಿ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸಲು LEAP (ಸ್ಥಳೀಯ ಆರ್ಥಿಕತೆಯ ವೇಗ ವರ್ಧಕದ ಕಾರ್ಯಕ್ರಮ) ಅಡಿಯಲ್ಲಿ 11 ಹೊಸ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್ ಗಳನ್ನು ರಾಜ್ಯದಾದ್ಯಂತ ಪ್ರಾರಂಭಿಸಲಾಗಿದೆ.
ಅನ್ವೇಷಣಾ ಮತ್ತು ಸರ್ಕಾರದ ನಡುವೆ ಒಪ್ಪಂದದ ಜ್ಞಾಪಕ ಪತ್ರಕ್ಕೆ (MOA) ಸಹಿ ಹಾಕುವುದು ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಒಂದು ಪ್ರಮುಖ ಮೈಲಿಗಲ್ಲಾಗಿ ಪರಿಣಮಿಸಲಿದೆ. ಅಲ್ಲದೆ ಇದು ನವೋದ್ಯಮಗಳು ಮತ್ತು ಉದಯೋನ್ಮುಖ ನಾವೀನ್ಯಕಾರರಿಗೆ ಹೊಸ ಅವಕಾಶ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.