ADVERTISEMENT

‘ಸಿಂಹಕಟಾಂಜನ’ ಕನ್ನಡದ ಮೊದಲ ಶಾಸನವೆಂದು ಘೋಷಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:48 IST
Last Updated 26 ನವೆಂಬರ್ 2022, 4:48 IST
ಶಿಕಾರಿಪುರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು
ಶಿಕಾರಿಪುರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು   

ಶಿಕಾರಿಪುರ: ‘ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ದೊರೆತ ಸಿಂಹಕಟಾಂಜನ ಶಾಸನವನ್ನು ಕನ್ನಡದ ಮೊದಲ ಶಾಸನವೆಂದು ಘೋಷಿಸಬೇಕು’ ಎಂದು ಒತ್ತಾಯಿಸಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

‘ತಾಲ್ಲೂಕಿನ ಐತಿಹಾಸಿಕ ತಾಳಗುಂದ ಗ್ರಾಮದಲ್ಲಿ 2013–14ನೇ ಸಾಲಿನಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ದೊರೆತಿರುವ ಸಿಂಹಕಟಾಂಜನ ಶಾಸನ ಕ್ರಿ.ಶ. 370– 400ರ ಅವಧಿಯದ್ದು ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ತಾಳಗುಂದ ಶಾಸನವು ಹಲ್ಮಿಡಿಗಿಂತಲೂ (ಕ್ರಿ.ಶ.450) ಕನಿಷ್ಠ 50 ವರ್ಷ ಪೂರ್ವದ್ದು ಎಂದು ಹೇಳಲು ಇತಿಹಾಸ ಸಂಶೋಧಕರು ದಾಖಲೆ ನೀಡಿದ್ದಾರೆ’ ಎಂದು ಪದಾಧಿಕಾರಿಗಳು ಹೇಳಿದರು.

‘ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಇಲಾಖೆ ಈ ಶಾಸನದ ಅವಧಿಯನ್ನು ಘೋಷಣೆ ಮಾಡಿ 6 ವರ್ಷಗಳು ಕಳೆದರೂ, ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸಿಂಹಕಟಾಂಜನ ಶಾಸನ ಮೊದಲ ಶಾಸನ ಎಂದು ತಾವು ಘೊಷಣೆ ಮಾಡಬೇಕು. ತಾಳಗುಂದ ಇತಿಹಾಸವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು. ತಾಳಗುಂದ ಉತ್ಸವ ಆಚರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೆಸ್ಕಾಂ ನಿರ್ದೇಶಕ ರುದ್ರೇಶ್, ಶಿಮುಲ್ ನಿರ್ದೇಶಕ ಸಿದ್ದಲಿಂಗಪ್ಪ, ಟಿಎಪಿಎಂಸ್ ನಿರ್ದೇಶಕ ಸುದೀರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್, ಪತ್ರಕರ್ತ ಎಂ.ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.