ADVERTISEMENT

ಸಾಗರ | ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಜಾರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:21 IST
Last Updated 18 ಜನವರಿ 2026, 3:21 IST
ಸಾಗರದಲ್ಲಿ ನಗರಸಭೆ ಆಯವ್ಯಯ ತಯಾರಿಸುವ ಕುರಿತು ಶನಿವಾರ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ ನಡೆಯಿತು
ಸಾಗರದಲ್ಲಿ ನಗರಸಭೆ ಆಯವ್ಯಯ ತಯಾರಿಸುವ ಕುರಿತು ಶನಿವಾರ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ ನಡೆಯಿತು   

ಸಾಗರ: ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಏಪ್ರಿಲ್ ತಿಂಗಳಿನಿಂದ ಪ್ರತ್ಯೇಕ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದ್ದಾರೆ.

ಇಲ್ಲಿನ ಪುರಭವನದಲ್ಲಿ ನಗರಸಭೆಯ 2026-27ನೇ ಸಾಲಿನ ಆಯವ್ಯಯ ತಯಾರಿಸುವ ಕುರಿತು ಶನಿವಾರ ಸಾರ್ವಜನಿಕರೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಇನ್ನು ಮುಂದೆ ಪ್ಲಾಸ್ಟಿಕ್ ತ್ಯಾಜ್ಯವನ್ನೇ ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ದೊಡ್ಡ ಸವಾಲು ಆಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಕಸವನ್ನು ಸಂಗಳ ಗ್ರಾಮದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿ ದಾವಣಗೆರೆಯಲ್ಲಿರುವ ದಾಲ್ಮಿಯ ಸಿಮೆಂಟ್ ಕಂಪೆನಿ ಘಟಕಕ್ಕೆ ಕಳುಹಿಸಲಾಗುತ್ತಿದೆ. ಹಾಲಿ ಇರುವ ತ್ಯಾಜ್ಯ ವಿಲೇವಾರಿ ಘಟಕದ ಮೇಲೆ ಒತ್ತಡ ಹೆಚ್ಚುತ್ತಿರುವುದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ನಗರವ್ಯಾಪ್ತಿಯ ಜನತೆಗೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ₹230 ಕೋಟಿ ಅನುದಾನ ತರಲು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಯತ್ನ ನಡೆಸುತ್ತಿದ್ದಾರೆ. ಈ ಅನುದಾನ ಮಂಜೂರಾದ ನಂತರ ನಲ್ಲಿಗಳಿಗೆ ಮೀಟರ್ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.

ಈ ಸ್ವತ್ತು ಸೌಲಭ್ಯ ತುರ್ತಾಗಿ ದೊರಕುವಂತಾಗಬೇಕು, ಐದಾರು ವಾರ್ಡ್‌ಗಳಿಗೆ ಒಂದರಂತೆ ಕಸ ವಿಲೇವಾರಿ ಘಟಕದ ಯಂತ್ರ ಅಳವಡಿಸಬೇಕು, ಸೋಲಾರ್ ಮೂಲಕ ಬೀದಿ ದೀಪ ಅಳವಡಿಸಬೇಕು, ಮಾರಿಕಾಂಬಾ ಜಾತ್ರೆಯ ಹಿನ್ನಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ವಿವಿಧ ಸಲಹೆಗಳನ್ನು ಸಾರ್ವಜನಿಕರು ನೀಡಿದರು.

ನಗರಸಭೆ ಮಾಜಿ ಸದಸ್ಯ ರವಿ ಲಿಂಗನಮಕ್ಕಿ, ಮರಿಯಾ ಲೀಮಾ, ಮಹೇಶ್ ಹೆಗಡೆ, ಹಿತಕರ ಜೈನ್, ಜಮೀಲ್ ಸಾಗರ್ ಮೊದಲಾದವರು ಮಾತನಾಡಿದರು.ಅಭಿಯಂತರ ಮದನ್, ಕಚೇರಿ ವ್ಯವಸ್ಥಾಪಕ ಬಾಲಚಂದ್ರ, ಕಂದಾಯ ನಿರೀಕ್ಷಕಿ ಮಮತಾ ಎಸ್.ಎಲ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.