ಶಿವಮೊಗ್ಗ: ‘ಪೋಕ್ಸೊ ಕಾಯ್ದೆ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇಂತಹ ಅಪರಾಧ ನಡೆಯದಂತೆ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಶಿವಮೊಗ್ಗದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.
ಶಿವಮೊಗ್ಗದ ಪಿಇಎಸ್ ಐಎಎಮ್‌ಎಸ್ ಕಾಲೇಜಿನ ಮೈತ್ರಿ ಫೋರಂ ವತಿಯಿಂದ ಆಯೋಜಿಸಿದ್ದ ‘ಪೋಕ್ಸೊ ಕಾಯ್ದೆ ಕುರಿತ ಅರಿವು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
‘ಪೋಕ್ಸೊ ಸಂತ್ರಸ್ತರು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಸಂಪರ್ಕಿಸಿ ಅವರನ್ನು ರಕ್ಷಿಸಬೇಕು. 18 ವರ್ಷದ ಒಳಗಿನ ಹುಡುಗಿ ಅಥವಾ ಹುಡುಗರು ಲೈಂಗಿಕವಾಗಿ ಶೋಷಣೆಗೆ ಒಳಗಾದ ಸಂದರ್ಭದಲ್ಲಿ ಅವರು ಸಂತ್ರಸ್ತರು ಅನ್ನಿಸಿಕೊಳ್ಳುತ್ತಾರೆ. ಈ ಹಿಂದೆ ಮಹಿಳೆಯರ ಮೇಲೆ ಆದ ಶೋಷಣೆಗೆ ಕಾನೂನಿನಲ್ಲಿ ಶಿಕ್ಷಿಸುವ ಅವಕಾಶವಿತ್ತು. ಆದರೆ, ಅಪ್ರಾಪ್ತರ ಮೇಲಿನ ಶೋಷಣೆಗೆ ವಿಶೇಷ ಕಾನೂನು ಇರಲಿಲ್ಲ. 2012ರಲ್ಲಿ ಪೋಕ್ಸೊ ಕಾಯ್ದೆ ಬಂದ ಮೇಲೆ ಅಪ್ರಾಪ್ತರ ಮೇಲಿನ ಶೋಷಣೆ ತಡೆಗಟ್ಟುವಲ್ಲಿ ಈ ಕಾನೂನು ವಿಶೇಷವಾಗಿ ನೆರವಾಗಿದೆ’ ಎಂದರು.
‘ಶಿವಮೊಗ್ಗ ಜಿಲ್ಲೆಯಲ್ಲಿ ಈಚೆಗೆ 234 ಬಾಲಗರ್ಭಿಣಿಯರು ಪ್ರಕರಣ ದಾಖಲಾಗಿವೆ. ಅಲ್ಲದೆ ಕಣ್ಮರೆಯಾಗುತ್ತಿರುವ ಪ್ರಕರಣದಲ್ಲಿ ಶೇ 80ರಷ್ಟು ಬಾಲಕಿಯರೇ ಆಗಿದ್ದಾರೆ. ಬಾಲ್ಯವಿವಾಹ ಆಗುವುದು, ಅದಕ್ಕೆ ಬೆಂಬಲ ನೀಡುವುದು ಕೂಡ ಅಪರಾಧ. ಇದಕ್ಕೆ 20 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ’ ಎಂದರು.
ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಸುದರ್ಶನ್, ರೋಟರಿಕ್ಲಬ್ ರಿವರ್ ಸೈಡ್‌ನ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ್, ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಶಿವಮೊಗ್ಗದ ಇನ್ನರ್‌ವ್ಹೀಲ್‌ನ ಅಧ್ಯಕ್ಷೆ ಶೀಲಾ ಸುರೇಶ್, ರೂಪಾ ರವಿ, ಮೈತ್ರಿ ಫೋರಂನ ಸಂಚಾಲಕಿ ಪ್ರೊ.ಅನಿತಾ, ಪೋರಂನ ಸದಸ್ಯೆ ಸೀತಮ್ಮ ಉಪಸ್ಥಿತರಿದ್ದರು.
ಒಂದು ಸಣ್ಣ ತಪ್ಪು ಆಯ್ಕೆ ಅಥವಾ ಕೆಲಸವು ಇಡೀ ಜೀವನವನ್ನೇ ನರಕ ಮಾಡುತ್ತದೆ. ಆದ್ದರಿಂದ ಪೋಕ್ಸೊ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಬೇಕುನ್ಯಾ.ಎಂ.ಎಸ್. ಸಂತೋಷ ಹಿರಿಯ ಸಿವಿಲ್ ನ್ಯಾಯಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.