ಶಿವಮೊಗ್ಗ: ‘ಸ್ವಾತಂತ್ರ್ಯಾನಂತರ ಈವರೆಗೆ 36,000 ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ. ಆದರೆ ಸೇನೆಯ ಹೋರಾಟದಲ್ಲಿ ಹುತಾತ್ಮ ಸೈನಿಕರ ಸಂಖ್ಯೆ 23,000. ದೇಶದ ಗಡಿ ಕಾಯುವ ಸೈನಿಕರ ಸ್ಮರಣೀಯ ಸೇವೆ ಮೀರಿ, ಅತೀ ಒತ್ತಡದಲ್ಲಿ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.
ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಯಾವುದೇ ಸಂದರ್ಭದಲ್ಲಿ ಸದಾ ಸನ್ನದ್ಧರಾಗಿದ್ದು ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಅಭಿನಂದನೀಯ ಎಂದರು.
ಪೊಲೀಸ್ ಸಿಬ್ಬಂದಿಗೆ ದೊರೆಯುವ ಗೌರವ ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ದೊರೆಯುವಂತಾಗಬೇಕು. ಕೇವಲ ವೇತನ-ಭತ್ಯೆಗಳಿಂದ ಅವರನ್ನು ಸಮಾಧಾನಪಡಿಸುವುದು ಸಾಧ್ಯವಾಗದು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಶಿವಮೊಗ್ಗ ಅತಿಸೂಕ್ಷ್ಮ ಪ್ರದೇಶ. ಆದಾಗ್ಯೂ ಜಿಲ್ಲೆಯ ಶಾಂತಿಯುತ ವಾತಾವರಣಕ್ಕೆ ಪೊಲೀಸ್ ಇಲಾಖೆಯ ಸೇವೆ ಅನುಪಮವಾದುದು ಎಂದು ಹೇಳಿದರು.
ಕಾಯಕನಿಷ್ಠೆ ಮೆರೆಯುವ, ಕೇವಲ ಆರೋಪಗಳಿಂದಷ್ಟೇ ಗುರುತಿಸಲಾಗುವ ಪೊಲೀಸರು ಪ್ರಶಂಸೆ -ಪುರಸ್ಕಾರಗಳನ್ನು ನಿರೀಕ್ಷಿಸದೇ ಎದುರಾಗಬಹುದಾದ ಎಲ್ಲಾ ಸಂದರ್ಭ-ಸವಾಲುಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯವಿದೆ. ಅದಕ್ಕಾಗಿ ಚಿಂತಿಸುವ, ಚರ್ಚಿಸುವ ಧೃತಿಗೆಡುವ ಅಗತ್ಯವಿಲ್ಲ ಎಂದ ಅವರು, ಪ್ರಾಮಾಣಿಕವಾಗಿ, ಆತ್ಮಸಂತೃಪ್ತಿಗಾಗಿ ಸೇವೆ ಮಾಡಬೇಕು. ಅದು ಮನಸಿಗೆ ಹೆಚ್ಚಿನ ಸಮಾಧಾನ ನೀಡಲಿದೆ ಎಂದರು.
ಪೊಲೀಸರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಗೆ ವೈಯಕ್ತಿಕ ಬದುಕಿನ ಉನ್ನತಿಗೂ ಚಿಂತಿಸಬೇಕಾದ ಅಗತ್ಯವಿದೆ. ಅಂಚೆ ಸೇರಿದಂತೆ ವಿವಿಧ ವಿಮಾ ಕಂಪನಿಗಳಲ್ಲಿ ಅಲ್ಪಪ್ರಮಾಣದಲ್ಲಿ ವಾರ್ಷಿಕ ಶುಲ್ಕ ಪಾವತಿಸಿ, ಹೆಚ್ಚಿನ ಲಾಭ ಪಡೆಯುವ ವಿಮಾ ಸೌಲಭ್ಯ ಹೊಂದುವಂತೆ ಜಿ.ಪಂ.ಸಿಇಒ ಎನ್.ಹೇಮಂತ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು, ಕಳೆದೊಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಕರ್ತವ್ಯನಿರತರಾದಾಗಲೇ ಮರಣ ಹೊಂದಿದ 191 ಮಂದಿ ಹುತಾತ್ಮ ಪೊಲೀಸರ ಹೆಸರು ಹೇಳಿದರು.
ಎಎಸ್ಪಿಗಳಾದ ಎ.ಜಿ.ಕಾರಿಯಪ್ಪ, ರಮೇಶ್, ಕೆ.ಎಸ್.ಆರ್.ಪಿ ಕಮಾಂಡೆಂಟ್ ಯುವಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.