ADVERTISEMENT

1,34,149 ಮಕ್ಕಳಿಗೆ ಪೋಲಿಯೊ ಲಸಿಕೆ

ಫೆ.27ರಿಂದ ಅಭಿಯಾನ, ಜಿಲ್ಲೆಯಲ್ಲಿ 1,051 ಬೂತ್‍ಗಳ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 14:44 IST
Last Updated 13 ಜನವರಿ 2022, 14:44 IST
ಶಿವಮೊಗ್ಗದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿದರು.
ಶಿವಮೊಗ್ಗದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿದರು.   

ಶಿವಮೊಗ್ಗ: ಪಲ್ಸ್ ಪೋಲಿಯೊ ಅಭಿಯಾನ ಫೆ.27ರಿಂದ ಆರಂಭವಾಗಲಿದೆ. ಅರ್ಹ 1,34,149 ಮಕ್ಕಳನ್ನು ಬೂತ್‍ಗಳಿಗೆ ಕರೆ ತಂದು ಲಸಿಕೆ ನೀಡಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಕೋರಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪಲ್ಸ್ ಪೋಲಿಯೊ ಅಭಿಯಾನದ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಖಾಸಗಿ ಶಾಲೆಗಳು ಸೇರಿ ಲಭ್ಯವಿರುವ ದೊಡ್ಡ ಹಾಲ್‍ಗಳನ್ನು ಬಳಸಿಕೊಂಡು ಬೂತ್‌ಮಟ್ಟದಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಬೇಕು. ಅಲೆಮಾರಿಗಳು, ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರು, ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳು ಸೇರಿ ಪ್ರತಿಯೊಬ್ಬರೂ ಲಸಿಕೆ ಪಡೆದಿರುವುದನ್ನು ಖಾತ್ರಿ ಪಡಿಸಬೇಕು ಎಂದು ಸೂಚಿಸಿದರು.

ADVERTISEMENT

ಪಲ್ಸ್ ಪೋಲಿಯೊ ಅಭಿಯಾನ ಶೇ 100ರಷ್ಟು ಯಶಸ್ವಿಯಾಗಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ಮನೆಯ ಸಮೀಪದ ಬೂತ್‍ಗಳಿಗೆ ಮೊದಲ ದಿನ ಕರೆ ತಂದು ಲಸಿಕೆ ಹಾಕಿಸಬೇಕು. ಈ ಕುರಿತು ಎಲ್ಲಾ ಮಾಧ್ಯಮಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ಕಾರ್ಯ ನಡೆಸಬೇಕು ಎಂದು ಸಲಹೆ ನೀಡಿದರು.

ಫೆ.27ರಂದು ಲಸಿಕಾ ಕೇಂದ್ರಗಳಲ್ಲಿ, ಜ.28ರಿಂದ ಗ್ರಾಮೀಣ ಪ್ರದೇಶಗಳಲ್ಲಿ 3 ದಿನಗಳು ಹಾಗೂ ನಗರ ಪ್ರದೇಶಗಳಲ್ಲಿ 4 ದಿನಗಳು ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ 1,051 ಬೂತ್‍ಗಳಲ್ಲಿ 1,34,149 ಮಕ್ಕಳು ಲಸಿಕೆ ಪಡೆಯಲಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ 89,807 ಹಾಗೂ ನಗರ ಪ್ರದೇಶದಲ್ಲಿ 44,342 ಮಕ್ಕಳು ಇದ್ದಾರೆ. ಪೋಲಿಯೊ ಯಶಸ್ವಿ ಅಭಿಯಾನಕ್ಕಾಗಿ 30 ಸಂಚಾರಿ ಹಾಗೂ 38 ಟ್ರಾನ್ಸಿಟ್ ಬೂತ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. 205 ಮೇಲ್ವಿಚಾರಕರನ್ನು, 3,090 ವ್ಯಾಕ್ಸಿನೇಟರ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ನಾಗರಾಜ ನಾಯಕ್ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ನೋಡಲ್ ಅಧಿಕಾರಿ ಡಾ.ಸತೀಶ್ಚಂದ್ರ, ಡಾ.ಕಿರಣ್, ಡಿಡಿಪಿಐ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.