
ಭದ್ರಾವತಿ (ಶಿವಮೊಗ್ಗ): ‘ಯಾವುದೇ ರಾಜಕೀಯ ಪಕ್ಷ ಇರಲಿ. ಆಸೆ– ಆಮಿಷಗಳ ಒಡ್ಡಿ ಜನರನ್ನು ವಂಚಿಸುವುದು ಸಲ್ಲ. ಬದಲಿಗೆ ಅವರಿಗೆ ದುಡಿಯುವುದನ್ನು ಕಲಿಸಿ. ಮೀನು ತಿನ್ನುವುದಲ್ಲ. ಮೀನು ಹಿಡಿಯುವುದು ಕಲಿಸಿ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಕಿವಿಮಾತು ಹೇಳಿದರು.
ಇಲ್ಲಿನ ವಿಐಎಸ್‌ಎಲ್ ಮೈದಾನದಲ್ಲಿ ಸೋಮವಾರ ತರಳಬಾಳು ಹುಣ್ಣಿಮೆಯ ಮೂರನೇ ದಿನದ ಕಾರ್ಯಕ್ರಮದಲ್ಲಿ ‘ರಾಜಕೀಯ ಮತ್ತು ಸಮಾಜ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರದ ಚುನಾವಣೆಯಲ್ಲಿ ಪ್ರತಿ ಕುಟುಂಬದ ಬ್ಯಾಂಕ್ ಖಾತೆಗೆ ₹10 ಸಾವಿರ ಮುಂಗಡ ಹಾಕಿದ್ದನ್ನು ಪ್ರಸ್ತಾಪಿಸಿದರು. ಅಲ್ಲಿ ಮುಂದೆ ಫಲಿತಾಂಶ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ ಆಂಜನೇಯ, ‘ನಾನು ಯಾವುದೇ ಪಕ್ಷದಲ್ಲಿ ಇರಲಿ. ಆಸೆ– ಆಮಿಷ ಒಡ್ಡುವ ಎಲ್ಲ ರಾಜಕೀಯ ಪಕ್ಷದವರ ರೀತಿ–ನೀತಿ ಟೀಕಿಸುತ್ತೇನೆ’ ಎಂದರು.
‘ಇಂದು ರಾಜಕಾರಣ ಮತ್ತು ಸಮಾಜ ಎರಡೂ ಬಹಳ ಕೆಟ್ಟಿದೆ. ರಾಜಕಾರಣಿಗಳು ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದ್ದಾರೆ. ಹೆಚ್ಚು ಹಣ ಕೊಟ್ಟವರನ್ನು ಗೆಲ್ಲಿಸುವ ಮನಸ್ಥಿತಿ ಬೆಳೆಸಿದ್ದಾರೆ. ಮತದಾರರಿಗೆ ಆಮಿಷ ಒಡ್ಡುವ ರಾಜಕಾರಣ ಬದಲಾವಣೆ ಆಗಬೇಕು. ಮತದಾರರು ಎಚ್ಚರ ತಪ್ಪದೇ, ಪರೋಪಕಾರ ಹಾಗೂ ಸೇವಾ ಮನೋಭಾವ ಹೊಂದಿದವರ ಆಯ್ಕೆ ಮಾಡಬೇಕು. ಬದಲಾವಣೆ ಬಯಸುವ ವ್ಯಕ್ತಿ ನಾನು. ಹೀಗಾಗಿಯೇ ನಿಷ್ಠುರವಾಗಿ ಮಾತಾಡುತ್ತಿದ್ದೇನೆ’ ಎಂದು ಹೇಳಿದರು.
‘ನಾಡಹಬ್ಬದ ರೀತಿ ಆಚರಿಸುವ ತರಳಬಾಳು ಹುಣ್ಣಿಮೆ ಸರ್ವ ಧರ್ಮ, ಜಾತಿಯ ಸಮನ್ವಯಕ್ಕೆ, ವಿದ್ಯಾರ್ಥಿ, ಕಾರ್ಮಿಕರು, ರೈತರು, ಮಹಿಳೆಯರು, ಶೋಷಿತರು ಎದುರಿಸುವ ಸವಾಲು, ಬೇಡಿಕೆ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಅದಕ್ಕೆ ಪರಿಹಾರ ಕಲ್ಪಿಸುವ ವೇದಿಕೆ ಆಗಿದೆ’ ಎಂದು ಆಂಜನೇಯ ಶ್ಲಾಘಿಸಿದರು.
ಉಪನ್ಯಾಸ ನೀಡಿದ ಬೇಲೂರು ಶಾಸಕ ಎಚ್.ಕೆ.ಸುರೇಶ್, ‘ಸಮಾಜವನ್ನು ತಿದ್ದಿ ತೀಡುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು. ಮೊದಲು ರಾಜಕಾರಣಿಗಳು ಭ್ರಷ್ಟರಾದರೆ ನಂತರ ಮತದಾರರು ಭ್ರಷ್ಟರಾಗುತ್ತಾರೆ. ಇಡೀ ಸಮಾಜವೇ ಭ್ರಷ್ಟವಾಗುತ್ತದೆ’ ಎಂದು ಹೇಳಿದರು.
‘ಮೊದಲು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವ ನಿರ್ಣಯ ಎಲ್ಲ ರಾಜಕಾರಣಿಗಳು ತೆಗೆದುಕೊಳ್ಳಬೇಕು. ನಂತರ ಜನರು ಬದಲಾಗುತ್ತಾರೆ. ಸಮಾಜ ಮತ್ತು ರಾಜಕಾರಣವನ್ನು ತಿದ್ದುವ ಶಕ್ತಿ ಮಠಾಧೀಶರಿಗೆ ಇದೆ’ ಎಂದು ಅಭಿಪ್ರಾಯಪಟ್ಟರು.
ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿಚಂದ್ರ ನಾಯ್ಕ ಮಾತನಾಡಿ, ‘ರಾಜಕಾರಣ ಮತ್ತು ಸಮಾಜದ ಮಧ್ಯೆ ರೈತರು ಬಡವರಾಗಿದ್ದಾರೆ. ರೈತರ ಮಕ್ಕಳಿಗೆ ಕನ್ಯೆ ಕೊಡದ ಪರಿಸ್ಥಿತಿ. ಅವರಿಗೆ ಎಲ್ಲಿಯೂ ಸಾಲ ಸಿಗುತ್ತಿಲ್ಲ. ವ್ಯವಸಾಯ ವೆಚ್ಚ ಹೆಚ್ಚು, ಲಾಭ ಕಡಿಮೆ ಎಂಬಂತಾಗಿದೆ. ಸರ್ಕಾರ ಮೊದಲು ರೈತರ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಿ’ ಎಂದು ಒತ್ತಾಯಿಸಿದರು.
‘ಸರ್ಕಾರ ಯಾವುದೇ ಯೋಜನೆಗೆ ಅನುದಾನ ಕೊಡುವಾಗ ಸಾರ್ವಜನಿಕರ ಹಣ ಒಂದೊಂದು ಪೈಸೆಯೂ ಪ್ರಾಮಾಣಿಕವಾಗಿ ಉಪಯೋಗ ಆಗುವಂತೆ ನೋಡಿಕೊಳ್ಳಬೇಕಿದೆ’ ಎಂದು ಕಿವಿಮಾತು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ರಮೇಶ್ ಬಾಬು ಉಪನ್ಯಾಸ ನೀಡಿದರು. ಚಿಕ್ಕಮಗಳೂರು–ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಶ್ರೀಮದ್ ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಭದ್ರಾವತಿ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಉಪಸ್ಥಿತರಿದ್ದರು.
ಕಲಾವಿದ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ, ಶಿವಮೊಗ್ಗದ ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳು ಪುಷ್ಪಾಂಜಲಿ ಭರತನಾಟ್ಯ, ಕೊಯಮತ್ತೂರಿನ ಎಸ್.ಜಿತೇಶ್ ಅವರಿಂದ ಯೋಗ ಪ್ರದರ್ಶನ ನಡೆಯಿತು. ಸಿಂದಗಿಯ ಸಪ್ತಸ್ವರ ಕಲಾ ಬಳಗದ ಯಶವಂತ್ ಬಡಿಗೇರ್ ವಚನಗೀತೆ ಗೀತೆ ಹಾಡಿದರು. ಆನಗೋಡು ಮರುಳಸಿದ್ದೇಶ್ವರ ಶಾಲೆ, ಪಲ್ಲಾಗಟ್ಟೆ ಸಿದ್ದಮ್ಮ ಗ್ರಾಮೀಣ ಪ್ರೌಢಶಾಲೆ ವಿದ್ಯಾರ್ಥಿಗಳು ಬಂಜಾರ ನೃತ್ಯ, ಕಂಗೀಲು ನೃತ್ಯ ಪ್ರದರ್ಶಿಸಿದರು.
ನಮ್ಮಲ್ಲಿರುವ ಬೇಧಗಳ ಮರೆಯದೇ ಇದ್ದರೆ ನಾವೆಲ್ಲ ಒಂದು ನಾವೆಲ್ಲರೂ ಭಾರತೀಯರು ಭಾರತಕ್ಕಾಗಿ ಬದುಕಿದ್ದೇವೆ. ಭಾರತಕ್ಕಾಗಿ ಬಾಳುತ್ತೇವೆ. ಭವ್ಯ ಭಾರತವೇ ನಮ್ಮ ಗುರಿ ಎಂದು ಹೇಳದೇ ಹೋದರೆ ಈ ದೇಶಕ್ಕೆ ಮತ್ತೊಮ್ಮೆ ಶನಿ ಕಾಟ ಬಂದೀತು ಹುಷಾರು ಎಂಬ ಎಚ್ಚರವನ್ನು ಪೋಷಕರು ಮಕ್ಕಳಲ್ಲಿ ಬೆಳೆಸಿ
–ಡಿ.ಎಚ್.ಶಂಕರಮೂರ್ತಿ ಮಾಜಿ ಸಚಿವ
ಜನರಿಗೆ ನೋಟು ಬೇಕು ರಾಜಕಾರಣಿಗಳಿಗೆ ವೋಟು ಬೇಕು ಎಂಬ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಇದು ಹೋಗಿ ಮನುಷ್ಯ ಸ್ವತಂತ್ರವಾಗಿ ತನ್ನ ಆಲೋಚನೆಗೆ ಪೂರಕವಾಗಿ ಜನಪ್ರತಿನಿಧಿಗಳ ಆಯ್ಕೆ ಮಾಡುವಂತಹ ಸ್ವತಂತ್ರ ಮನೋಭಾವ ಬೆಳೆದರೆ ದೇಶ ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಿದೆ
– ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ
ಇಡೀ ಸಮಾಜ ರಾಜಕಾರಣಿಗಳನ್ನು ಅನುಮಾನದಿಂದ ನೋಡುವ ನಂಬಿಕೆ ಕಳೆದುಕೊಂಡ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಲೋಪಗಳು ಇರಬಹುದು. ಆದರೆ ಇಡೀ ಸಮಾಜದ ಬೆಳವಣಿಗೆಗೆ ಪ್ರಜಾಪ್ರಭುತ್ವದ ಕೊಡುಗೆ ದೊಡ್ಡದಿದೆ. ಪ್ರಜಾತಂತ್ರದ ಮೌಲ್ಯಗಳಿಗೆ ಗೌರವ ಕೊಡಬೇಕಾದರೆ ರಾಜಕಾರಣವನ್ನು ಪ್ರೀತಿಸಬೇಕಾಗುತ್ತದೆ
-ರಮೇಶ್ ಬಾಬು ವಿಧಾನಪರಿಷತ್ ಸದಸ್ಯ
ಸಿರಿಗೆರೆ ಶ್ರೀಗಳ ದೂರದೃಷ್ಟಿಯ ಪರಿಣಾಮ ಮಠದಿಂದ ಶಾಲಾ–ಕಾಲೇಜುಗಳು ಆರಂಭವಾಗಿ ಅಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ಜನರು ದೇಶ– ವಿದೇಶದಲ್ಲಿ ಜೀವ ನಡೆಸುತ್ತಿದ್ದಾರೆ. ಈಗ ನೀರಾವರಿ ಯೋಜನೆಗಳ ಮೂಲಕ ರೈತರ ನೆರವಿಗೆ ನಿಂತಿದ್ದಾರೆ
-ಎಂ.ಚಂದ್ರಪ್ಪ ಹೊಳಲ್ಕೆರೆ ಶಾಸಕ
ಬ್ರಿಟಿಷರು ಬಿಟ್ಟು ಹೋಗುವಾಗ ದೇಶದಲ್ಲಿ ಶೇ 13ರಷ್ಟು ಸಾಕ್ಷರತೆ ಇತ್ತು. ಈಗ ಶೇ 95ರಷ್ಟು ವಿದ್ಯಾವಂತರು ಇದ್ದಾರೆ. ಆದರೆ ಅಪರಾಧ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಆರೋಗ್ಯ ಮೌಲ್ಯಗಳು ಬೇಕು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆಕೋಟಾ ಶ್ರೀನಿವಾಸ ಪೂಜಾರಿ ಚಿಕ್ಕಮಗಳೂರು– ಉಡುಪಿ ಸಂಸದ
ವಿಐಎಸ್‌ಎಲ್ ವೈಭವದ ದಿನಗಳು ಮರಳಲಿ; ಸತ್ತೂರು ಶ್ರೀ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಮನುಷ್ಯ ಮನಸ್ಸು ಮಾಡಿದರೆ ಕಸ ರಸ ಆಗಬಹುದು ಎಂಬುದಕ್ಕೆ ಈ ಹಿಂದೆ ಕಸದ ತೊಟ್ಟಿಯಾಗಿದ್ದು ಈಗ ಸ್ವಚ್ಛವಾಗಿ ತರಳಬಾಳು ಹುಣ್ಣಿಮೆಗೆ ಸಿದ್ಧವಾಗಿರುವ ವಿಐಎಸ್‌ಎಲ್ ಮೈದಾನವೇ ಸಾಕ್ಷಿ ಎಂದು ಶ್ಲಾಘಿಸಿದರು. ವಿಐಎಸ್‌ಎಲ್ ಕಾರ್ಖಾನೆ ಮತ್ತೆ ಪುನಶ್ಚೇತನಗೊಂಡು ಅದು ಮತ್ತೆ ತನ್ನ ಹಳೆಯ ವೈಭವದ ದಿನಗಳಿಗೆ ಮರಳಲಿ ಎಂದು ಆಶಿಸಿದರು. ಸಿರಿಗೆರೆ ಮಠದ ಹಿರಿಯ ಜಗದ್ಗುರು ಶಿವಕುಮಾರ ಶ್ರೀಗಳು ಭದ್ರ ಬುನಾದಿಯ ಹಾಕಿ ಸಮಾಜ ಮುಖಿಯಾಗಿ ಸಮಾಜವನ್ನು ಸಂಘಟಿಸುವಲ್ಲಿ ಸಮಾಜದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದರು ಎಂದು ಸ್ಮರಿಸಿದರು. ಆ ಪರಂಪರೆಯನ್ನು ಈಗಿನ ಶ್ರೀಗಳು ಮುಂದುವರೆಸಿಕೊಂಡು ಬಂದಿದ್ದಾರೆ ಎಂದರು.
ವಾಲಿಬಾಲ್ ಪಂದ್ಯಾವಳಿ; ಕಂದಗಲ್‌ಗೆ ಪ್ರಥಮ ಪ್ರಶಸ್ತಿ ತರಳಬಾಳು ಹುಣ್ಣಿಮೆಯ ಅಂಗವಾಗಿ ಸೋಮವಾರ ನಡೆದ ವಾಲಿಬಾಲ್ ಕ್ರೀಡೆಯಲ್ಲಿ ದಾವಣಗೆರೆ ಜಿಲ್ಲೆ ಕಂದಗಲ್‌ನ ವರುಣ್ ಬಾಯ್ಸ್ ತಂಡ ಪ್ರಥಮ ಬಹುಮಾನ ₹30000 ದ್ವಿತೀಯ ಬಹುಮಾನ ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆಯ ಕ್ರೀಡಾಬಳಗ ₹20000 ಹಾಗೂ ತೀರ್ಥಹಳ್ಳಿಯ ಕ್ರೀಡಾಬಳಗ ತೃತೀಯ ಬಹುಮಾನ ₹10000 ನಗದು ಮತ್ತು ಟ್ರೋಫಿ ಪಡೆದವು.
ಭದ್ರಾವತಿ ತರಳಬಾಳು ಹುಣ್ಣಿಮೆಯಲ್ಲಿ ಇಂದು ಸಂಜೆ 6:30ಕ್ಕೆ ಸಾಹಿತ್ಯ ಮತ್ತು ಶಿಕ್ಷಣ ಗೋಷ್ಠಿ.. ಆಶೀರ್ವಚನ: ಶಿವಮೊಗ್ಗ ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮುಖ್ಯ ಅತಿಥಿಗಳು: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸಾಹಿತಿಗಳಾದ ಕೆ.ವೈ.ನಾರಾಯಣಸ್ವಾಮಿ ಪ್ರೊ. ರಾಜೇಂದ್ರ ಚೆನ್ನಿ ಉಪನ್ಯಾಸ: ಸಾಹಿತಿಗಳಾದ ಎಚ್. ಡುಂಡಿರಾಜ್ ರಾಜಪ್ಪ ದಳವಾಯಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜ್ಯೋತಿಶಂಕರ್ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಪ್ರಶಾಂತ್ ನಾಯಕ ವಿಶೇಷ ಆಹ್ವಾನಿತರು: ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಸಾಂಸ್ಕೃತಿಕ ಕಾರ್ಯಕ್ರಮ: ವಚನಗೀತೆ: ಹುಬ್ಬಳ್ಳಿ ಸಂಗೀತ ಮನೆ ತಂಡದ ಸೌಮ್ಯಾ-ಮಂಜುನಾಥ ಹೊಸವಾಳ ದಂಪತಿ ನೃತ್ಯ ರೂಪಕ: ಸಿರಿಗೆರೆ ವೈರಾಗ್ಯ ನಿಧಿ ಅಕ್ಕಮಹಾದೇವಿ - ತರಳಬಾಳು ಕಲಾ ಸಂಘ ಯಕ್ಷಗಾನ: ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು. ಕುವೆಂಪು ನಮನ: ಸಿರಿಗೆರೆ ತರಳಬಾಳು ಸಿಬಿಎಸ್ಇ ಶಾಲೆ ವಿದ್ಯಾರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.