ADVERTISEMENT

ಧರ್ಮಸ್ಥಳಕ್ಕೆ ರಾಜಕೀಯ ಪ್ರೇರಿತ ಯಾತ್ರೆ: BJP–JDS ನಡೆಗೆ ಆಯನೂರು ಮಂಜುನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 6:24 IST
Last Updated 31 ಆಗಸ್ಟ್ 2025, 6:24 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ಎಸ್‌ಐಟಿ ರಚನೆ ಮೂಲಕ ಧರ್ಮಸ್ಥಳಕ್ಕೆ ಹತ್ತಿದ್ದ ಕಳಂಕ ತೊಳೆಯುತ್ತಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ. ಆದರೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಈಗ ಅಲ್ಲಿಗೆ ಪಾದಯಾತ್ರೆ ಹೊರಟಿದ್ದಾರೆ. ಅದು ಹಾಸ್ಯಾಸ್ಪದ. ವಿರೋಧ ಪಕ್ಷಗಳ ಈ ಹೆಜ್ಜೆಗಳು ರಾಜಕಾರಣದ ಹೆಜ್ಜೆಗಳೇ ಹೊರತು, ಧರ್ಮದ ಹೆಜ್ಜೆಗಳಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವುದು ಷಡ್ಯಂತ್ರ ಎಂಬ ಮಾತು ಮೊದಲಿಗೆ ಹೇಳಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್. ಅದಾದ ನಂತರ ಬಿಜೆಪಿಯವರಿಗೆ ಜ್ಞಾನೋದಯವಾಯಿತು. ಧರ್ಮಸ್ಥಳದ ಸುತ್ತಮುತ್ತ ನಡೆದಿವೆ ಎನ್ನಲಾದ ಅಸಹಜ ಸಾವುಗಳ ಕುರಿತಂತೆ ಸರ್ಕಾರ ಎಸ್ಐಟಿ ರಚಿಸಿದಾಗ ಅದನ್ನು ಸ್ವತಃ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಕೂಡ ಸ್ವಾಗತಿಸಿದ್ದರು.

ಆದರೆ, ವಿರೋಧ ಪಕ್ಷದ ನಾಯಕರು ಅದನ್ನು ವಿರೋಧಿಸುತ್ತಿದ್ದಾರೆ. ಇದು ಎಳಸುತನದ ರಾಜಕಾರಣವೇ ಹೊರತು ಮತ್ತೇನೂ ಅಲ್ಲ. ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡದೇ ಇದ್ದರೆ ಯಾವ ಸತ್ಯಗಳೂ ಹೊರಬರುತ್ತಿರಲಿಲ್ಲ. ಧರ್ಮಸ್ಥಳದ ಬಗ್ಗೆ ಕಳಂಕ ನಿವಾರಣೆಯಾಗಿ ಭಕ್ತರಿಗೆ ವಾಸ್ತವ ಗೊತ್ತಾಗುತ್ತಿದ್ದರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದರು.

ADVERTISEMENT

ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ಆರೋಪಗಳ ಮಾಡುತ್ತಿರುವವರು ಯಾರ ಬೆಂಬಲಿಗರಾಗಿದ್ದಾರೆ. ಯಾವ ಸಂಘಟನೆಗೆ ಸೇರಿದ್ದಾರೆ ಎಂಬುದನ್ನು ಬಿಜೆಪಿಯವರು ಯೋಚಿಸಬೇಕು. ಈ ತಿಮ್ಮರೋಡಿ ಯಾರು ? ಗಿರೀಶ್ ಮಟ್ಟಣ್ಣವರ್ ಎಲ್ಲಿದ್ದ ? ಯಾವ ಪಕ್ಷದಲ್ಲಿದ್ದ? ಅವರ್ಯಾರೂ ಕಾಂಗ್ರೆಸ್‌ ಪಕ್ಷದ ಪರ ಅಲ್ಲ, ಎಡಪಂಥೀಯರೂ ಅಲ್ಲ ಎಂದರು.

ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ಇನ್ನೂ ಯಾವುದೇ ತೀರ್ಮಾನ ಕೊಟ್ಟಿಲ್ಲ. ಸ್ವಲ್ಪದಿನ ಕಾಯಲಿ ಸತ್ಯಗಳು ಹೊರಬರುತ್ತವೆ. ವೀರೇಂದ್ರ ಹೆಗ್ಗಡೆಯವರು ದೋಷಮುಕ್ತರಾಗುತ್ತಾರೆ ಎಂಬ ನಂಬಿಕೆ ನಮಗೂ ಇದೆ. ಅವರು ತಪ್ಪು ಮಾಡಿದ್ದರೆ ಶಿಕ್ಷೆಯೂ ಆಗಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಕ್ಷದ ಮುಖಂಡರಾದ ಎಂ.ಶ್ರೀಕಾಂತ್, ರಮೇಶ್ ಶಂಕರಘಟ್ಟ, ವೈ.ಎಚ್.ನಾಗರಾಜ್, ಜಿ.ಡಿ.ಮಂಜುನಾಥ, ಧೀರರಾಜ ಹೊನ್ನವಿಲೆ, ಮಂಜುನಾಥ ಬಾಬು, ಹಾಲೇಶ್, ಆರ್.ಚಂದ್ರಶೇಖರ್, ಸ್ಟೆಲ್ಲಾ ಮಾರ್ಟಿನ್, ಬಸವರಾಜ ಇದ್ದರು. 

ರಾಜ್ಯದಲ್ಲಿ ಅತಿವೃಷ್ಟಿಯಿಂದ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸರ್ಕಾರವನ್ನು ಎಚ್ಚರಿಸಬೇಕಿದ್ದ ವಿರೋಧ ಪಕ್ಷದವರು ಬೇಜಬ್ದಾರಿಯಿಂದ ವರ್ತಿಸುವ ಜತೆಗೆ ಅಪ್ರಬುದ್ಧತೆಯಿಂದ ನಡೆದುಕೊಳ್ಳುತ್ತಿದ್ದಾರೆ
ಆಯನೂರು ಮಂಜುನಾಥ್ ಕೆಪಿಸಿಸಿ ವಕ್ತಾರ
‘ಮಹಿಳೆ ಎಂಬ ಕಾರಣಕ್ಕೆ ಬಾನು ಮುಷ್ತಾಕ್‌ ಗೆ ವಿರೋಧ’
ಲೇಖಕಿ ಬಾನು ಮುಷ್ತಾಕ್‌ ಮಹಿಳೆ ಎಂಬ ಕಾರಣಕ್ಕೆ ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂದು ಆಯನೂರು ಮಂಜುನಾಥ್ ಹೇಳಿದರು. ಇಲ್ಲಿ ಬಾನು ಮುಷ್ತಾಕ್‌ ಮುಸ್ಲಿಂ ಸಮುದಾಯದವರು ಎಂಬುದಕ್ಕಿಂತ ಮಹಿಳೆ ಎಂಬ ಕಾರಣವೇ ಮುಖ್ಯವಾಗಿದೆ. ಈ ಹಿಂದೆ ಕೆ.ಎಸ್. ನಿಸಾರ್‌ ಅಹಮದ್ ಕೂಡ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಅಲ್ಪಸಂಖ್ಯಾತರಲ್ಲವೇ ಎಂದು ಆಯನೂರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.