ADVERTISEMENT

ಮುಷ್ಕರ ವಾಪಸ್: ಸ್ವಚ್ಛತೆ ಕಾರ್ಯ ಇಂದಿನಿಂದ

ನಾಲ್ಕು ದಿನ ಅಕ್ಷರಶಃ ಕಸದ ತೊಟ್ಟಿಯಾಗಿದ್ದ ಶಿವಮೊಗ್ಗ ನಗರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:02 IST
Last Updated 5 ಜುಲೈ 2022, 4:02 IST
ಶಿವಮೊಗ್ಗ ನಗರದ ರಸ್ತೆಯ ಪಕ್ಕದಲ್ಲಿ ಹಾಕಿರುವ ಕಸದ ರಾಶಿ
ಶಿವಮೊಗ್ಗ ನಗರದ ರಸ್ತೆಯ ಪಕ್ಕದಲ್ಲಿ ಹಾಕಿರುವ ಕಸದ ರಾಶಿ   

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಕೈಗೊಂಡಿದ್ದ ಅನಿರ್ದಿಷ್ಟ ಅವಧಿಯ ಮುಷ್ಕರ ನಾಲ್ಕನೇ ದಿನ ಸುಖಾಂತ್ಯ ಕಂಡಿದೆ.

‘ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿರುವ ಕಾರಣ ಮುಷ್ಕರ ಹಿಂದಕ್ಕೆ ಪಡೆದಿದ್ದೇವೆ. ಮಂಗಳವಾರದಿಂದ (ಜುಲೈ 5) ಕೆಲಸಕ್ಕೆ ಹಾಜರಾಗಲಿದ್ದೇವೆ’ ಎಂದು ಮಹಾನಗರ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪೆಂಚಾಲಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕಸದ ತೊಟ್ಟಿಯಾಗಿದ್ದ ನಗರ: ಜುಲೈ 1ರಿಂದ ಇಡೀ ನಗರ ಕಸದ ತೊಟ್ಟಿಯಾಗಿ ಬದಲಾಗಿತ್ತು. ನಗರದಲ್ಲಿ ಹಾಯ್ದು ಹೋಗಿರುವ ರೈಲ್ವೆ ಹಳಿಯ ಆಸುಪಾಸು, ರಸ್ತೆಗಳ ಅಕ್ಕಪಕ್ಕ, ರಾಜಕಾಲುವೆ, ಕಾಲಿ ನಿವೇಶನ, ಹಾಳು ಕಟ್ಟಡ, ಬಯಲು ಪ್ರದೇಶ ತಾತ್ಕಾಲಿಕ ಕಸದ ತೊಟ್ಟಿಗಳಾಗಿ ಬದಲಾಗಿದ್ದವು.

ADVERTISEMENT

ಕಸ ಒಯ್ಯುವವರು ಮುಷ್ಕರ ಹೂಡಿದ್ದರಿಂದ. ಅವರ ನಿರೀಕ್ಷೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿ ಕಟ್ಟಿ ಇಟ್ಟ ಕಸದ ಪೊಟ್ಟಣಗಳು ಈಗ ದುರ್ನಾತ ಬೀರತೊಡಗಿದ್ದವು. ಹೀಗಾಗಿ ನಸುಕು, ನಡು ಮಧ್ಯಾಹ್ನ ಹಾಗೂ ರಾತ್ರಿಯಾಗಿ ಜನರ ಓಡಾಟ ಕಡಿಮೆ ಆಗುತ್ತಿದ್ದಂತೆಯೇ ಕಸದ ಪೊಟ್ಟಣಗಳನ್ನು ಒಯ್ದು ಹಾಕಿ ಮನೆಯೊಳಗಿನ ಕಸಕ್ಕೆ ಮುಕ್ತಿ ನೀಡುತ್ತಿದ್ದರು. ಹೆಲ್ಮೆಟ್ ಧರಿಸಿ ಕಸದ ಪೊಟ್ಟಣ ಕೈಯಲ್ಲಿ ಹಿಡಿದು ಯಾರಾದರೂ ನೋಡುವರಾ ಎಂಬ ಆತಂಕದಲ್ಲಿಯೇ ಅತ್ತ ಇತ್ತ ನೋಡುತ್ತಾ ಖಾಲಿ ಜಾಗದಲ್ಲಿ ಕಸ ಎಸೆಯುವುದು ಕಾಣಬಹುದಿತ್ತು.

ಶಿವಮೊಗ್ಗ ನಗರದ ವ್ಯಾಪ್ತಿಯನ್ನು ರೈಲು ಪ್ರವೇಶಿಸುತ್ತಿದ್ದಂತೆಯೇ ಕಸದ ದುರ್ನಾತ ಪ್ರಯಾಣಿಕರನ್ನು ಸೆಳೆಯುತ್ತಿತ್ತು. ಜೊತೆಗೆ ರೈಲು ಹಳಿ ಆಸುಪಾಸಿನಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಟ ನಡೆಸಬೇಕಿತ್ತು. ಜೋರು ಮಳೆಯಿಂದ ರಾಜ ಕಾಲುವೆಯಲ್ಲಿ ಹರಿಯುವ ನೀರು ಕಸದ ಪೊಟ್ಟಣಗಳನ್ನು ಹೊತ್ತು ಸಾಗಿತ್ತು.

ಪ್ರಮುಖ ರಸ್ತೆಗಳ ಆಸುಪಾಸು, ಮಾರುಕಟ್ಟೆ ಪ್ರಾಂಗಣ, ಸಂತೆ, ಆಟದ ಮೈದಾನಗಳ ಸುತ್ತ ಈಗ ಕಸದ ರಾಶಿ ಕಾಣ ಸಿಗುತ್ತಿತ್ತು.

ತುಂಗೆಯೂ ಮಲಿನ: ನಗರವನ್ನು ಬಳಸಿಕೊಂಡು ಹರಿಯುವ ತುಂಗಾ ನದಿ ಇಲ್ಲಿಯವರೆಗೆ ಕೊಳಚೆ ನೀರನ್ನು ಮೈಗೂಡಿಸಿಕೊಂಡು ಹರಿಯುತ್ತಿದ್ದಳು. ಈಗ ಕಸದ ಪೊಟ್ಟಣಗಳನ್ನು ಹೊತ್ತು ಸಾಗಿದ್ದಳು. ಮಳೆಯ ಕೆಂಪು ನೀರಿನ ಜೊತೆಗೆ ಪ್ಲಾಸ್ಟಿಕ್‌ನ ರಾಶಿಯೂ ಹರಿದುಹೋಯಿತು. ನದಿ ದಂಡೆಯ ನಿವಾಸಿಗಳಲ್ಲಿ ಹಲವರು ಕಸವನ್ನು ನೆರವಾಗಿ ತುಂಗೆಯ ಒಡಲಿಗೆ ಹಾಕುತ್ತಿದ್ದರು.

ನಿವಾಸಿಗಳ ನಿಟ್ಟುಸಿರು: ಮುಂಜಾನೆ ಕಸದ ಗಾಡಿಯವರು ಬಂದ ಮೇಲೆ ನಮ್ಮ ಬೀದಿ ಜೀವ ಪಡೆಯುತ್ತಿತ್ತು. ಈಗ ನಾಲ್ಕು ದಿನಗಳಿಂದ ಅವರ ನಿರೀಕ್ಷೆಯಲ್ಲಿ ಹೊರಗೆ ನಿಂತು ಕಾಯುವುದೇ ಆಗಿದೆ. ಮನೆಯಲ್ಲಿ ಕಸದ ಪೊಟ್ಟಣಗಳ ಕಟ್ಟಿ ಇಟ್ಟಿದ್ದೇವೆ. ಅವನ್ನು ಯಾವಾಗ ವಿಲೇವಾರಿ ಮಾಡುವುದೋ ಗೊತ್ತಾಗುತ್ತಿರಲಿಲ್ಲ. ಸದ್ಯ ಸ್ಟ್ರೈಕ್ ಮುಗಿಯಿತಲ್ಲ ಎಂದು ವಿನೋಬನಗರದ ನಿವಾಸಿ ಮುಕ್ತಾ ಮಂಜುನಾಥ್ ನಿಟ್ಟುಸಿರುಬಿಟ್ಟರು.

ನಗರದ ಕಸ ಸಂಗ್ರಹಣೆ ಸಮಸ್ಯೆ ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ನೇತೃತ್ವದಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯರು, ಮೇಯರ್ ಸವಿತಾ ಅಣ್ಣಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಪ್ರತಿಭಟನೆ ಮುಂದುವರಿದಲ್ಲಿ ಅನಾರೋಗ್ಯಕರ ವಾತಾವರಣ ಉಂಟಾಗಲಿದೆ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಬಿ.ಎ. ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಮೆಹಖ್ ಶರೀಫ್, ಆರ್.ಸಿ. ನಾಯ್ಕ್, ಮಂಜುಳಾ ಮುಖಂಡರಾದ ಮಧುಸೂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.