ADVERTISEMENT

‘ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:15 IST
Last Updated 11 ಜನವರಿ 2022, 7:15 IST
ಸೊರಬದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆಯಿಂದ ಸೋಮವಾರ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ನೀಡಲಾಯಿತು. ಶಾಸಕ ಕುಮಾರ್ ಬಂಗಾರಪ್ಪ ಇದ್ದರು.
ಸೊರಬದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆಯಿಂದ ಸೋಮವಾರ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ನೀಡಲಾಯಿತು. ಶಾಸಕ ಕುಮಾರ್ ಬಂಗಾರಪ್ಪ ಇದ್ದರು.   

ಸೊರಬ: ಸರ್ಕಾರ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಮುಂದಾಗಿದ್ದು, 2ನೇ ಡೋಸ್ ಪಡೆದು 9 ತಿಂಗಳಾದವರು ಲಸಿಕೆ ಪಡೆಯಬೇಕು ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಭು ಕೆ. ಸಾಹುಕಾರ್ ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಕೋವಿಡ್ ನಿಯಂತ್ರಣ ಕಾರ್ಯಪಡೆ ಹಾಗೂ ಸೊರಬ ಆರೋಗ್ಯಾಧಿಕಾರಿಗಳ ಕಚೇರಿಯಿಂದ ನಡೆದ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರು ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಖಗವಸು, ಸ್ಯಾನಿಟೈಸರ್ ಬಳಸುವ ಜತೆಗೆ ಅಂತರ ಕಾಯ್ದುಕೊಳ್ಳಬೇಕು. ಲಸಿಕೆ ಪಡೆಯದವರು ಕಡ್ಡಾಯವಾಗಿ ಪಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಯ ಪಾಟೇಲ್ ಮಾತನಾಡಿ, ‘ಕೊರೊನಾಗೆ ಎದೆಗುಂದದೆಉತ್ತಮ ಆಹಾರ ಹಾಗೂ ಜೀವನ ಕ್ರಮ ಹೊಂದುವ ಜತೆಗೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು. ಕೊರೊನಾ ನಿಯಂತ್ರಣಕ್ಕೆ ಲಸಿಕೆ ನೀಡಿದ್ದರಿಂದ ಗುಣಮುಖವಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ತಾಲ್ಲೂಕಿನಲ್ಲಿ 8 ಸಾವಿರವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಲಾಗಿದೆ’ ಎಂದುತಿಳಿಸಿದರು.

ಕಾರ್ಯಕ್ರಮಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಚಾಲನೆ ನೀಡಿದರು. ತಹಶೀಲ್ದಾರ್ ಶಿವಾನಂದ ಪಿ.ರಾಣೆ, ಪುರಸಭೆ ಮುಖ್ಯಾಧಿಕಾರಿ ಡಿ.ಮಹೇಂದ್ರ, ಸದಸ್ಯ ಎಂ.ಡಿ.ಉಮೇಶ್, ಆರಾಧನಾ ಸಮಿತಿ ಸದಸ್ಯ ಅಶೋಕ್ ಶೇಟ್, ಡಾ.ಸತೀಶ್, ಶಿಲ್ಪಾ ಕಾನಡೆ ಸೇರಿ ವೈದ್ಯರು, ಆರೋಗ್ಯ ಸಹಾಯಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.