ADVERTISEMENT

ಮುಳಗಡೆ ಸಂತ್ರಸ್ತರ ವಿರುದ್ಧವೂ ಪ್ರಕರಣ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಮೇ 2019, 13:02 IST
Last Updated 9 ಮೇ 2019, 13:02 IST

ಶಿವಮೊಗ್ಗ: ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮುಳುಗಡೆ ಸಂತ್ರಸ್ತರ ಮೇಲೂ ಅರಣ್ಯ ಇಲಾಖೆ ಭೂ ಕಬಳಿಕೆ ಪ್ರಕರಣ ದಾಖಲಿಸುತ್ತಿದೆ. ಇದು ಅಮಾನವೀಯ ಎಂದು ಸಾಗರದ ರೈತ ಹೋರಾಟ ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಶರಾವತಿ ಮುಳುಗಡೆ ಪ್ರದೇಶದ ರೈತರು ಬದುಕು ಕಟ್ಟಿಕೊಳ್ಳಲು ಅರಣ್ಯ ಭೂಮಿಯಲ್ಲಿ ನೆಲೆಸಿದ್ದಾರೆ. ಅವರ ಮೇಲೆ ಈಗಾಗಲೇ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ವಿಶೇಷ ಭೂ ನ್ಯಾಯಾಲಯ ಅವರಿಗೆ ಒಂದು ವರ್ಷ ಶಿಕ್ಷೆ, ₨ 10 ಸಾವಿರ ದಂಡ ವಿಧಿಸಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಪ್ರವೀಣ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರಿನ ಸುತ್ತಮುತ್ತ ಸರ್ಕಾರಿ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು 2011ರಲ್ಲಿ ಈ ಕಾಯ್ದೆ ಜಾರಿಗೆ ತರಲಾಗಿತ್ತು. ಅಧಿಕಾರಿಗಳು ಈ ಕಾಯ್ದೆ ದುರುಪಯೋಗ ಮಾಡಿಕೊಂಡು ಬಡವರ ಬದುಕು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಶಿಕ್ಷೆಗೆ ಒಳಗಾದ ಮುಳುಗಡೆ ಸಂತ್ರಸ್ತ ಕುಟುಂಬದ ಗಣಪತಿ, ವಾಸು, ಶಾಂತಮ್ಮ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಕೋರ್ಟ್‌ ಜಾಮೀನು ನೀಡಿದೆ. ಅಲ್ಲೂ ಶಿಕ್ಷೆ ಎತ್ತಿಹಿಡಿದರೆ ಸುಪ್ರಿಂಕೋರ್ಟ್‌ ಹೋಗಲು ಈ ಬಡವರಿಗೆ ಸಾಧ್ಯವೇ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಸಾಗುವಳಿದಾರ ಕುಟುಂಬಗಳನ್ನು ಒಕ್ಕಲೆಬ್ಬಿಸಬಾರದು ಎಂದು ಮೌಖಿಕವಾಗಿ ಹೇಳಿದ್ದರೂ, ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ. ತಕ್ಷಣ ಸರ್ಕಾರ ಭೂಕಬಳಿಕೆ ನಿಷೇಧ ಕಾಯಗೆ ತಿದ್ದುಪಡಿ ತರಬೇಕು. ಸಣ್ಣ ರೈತರನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಬೇಕು. ಶಿಕ್ಷೆಗೆ ಒಳಗಾಗಿರುವ ರೈತರನ್ನು ಬಿಡುಗಡೆ ಮಾಡಬೇಕು. 200ಕ್ಕೂ ಹೆಚ್ಚು ರೈತರಿಗೆ ಅರಣ್ಯ ಇಲಾಖೆ ನೀಡಿರುವ ನೋಟಿಸ್ ಹಿಂಪಡೆಯಬೇಕು. 20 ವರ್ಷಗಳಿಗೂ ಹೆಚ್ಚು ಅವಧಿ ಸ್ವಾಧೀನದಲ್ಲಿರುವ ರೈತರನ್ನು ಹೊರಗಿಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗಣಪತಿಭಟ್, ಮಂಜುನಾಥ್, ಶಶಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.