ADVERTISEMENT

ಅರಣ್ಯ ಸಾಗುವಳಿ ಹಕ್ಕು ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 12:24 IST
Last Updated 8 ಜೂನ್ 2019, 12:24 IST

ಶಿವಮೊಗ್ಗ: ಅರಣ್ಯಹಕ್ಕು ಕಾಯ್ದೆ ಅನ್ವಯ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ಸಾಗುವಳಿ ಹಕ್ಕುಪತ್ರ ನೀಡಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಅಧ್ಯಕ್ಷ ಟಿ.ಚಂದ್ರಪ್ಪ ಆಗ್ರಹಿಸಿದರು.

ಜಿಲ್ಲೆಯ ಸುಮಾರು 44 ಸಾವಿರ ರೈತರು ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ 8,900ಅರ್ಜಿಗಳನ್ನು ಮಾತ್ರ ಇತ್ಯರ್ಥ ಮಾಡಲಾಗಿದೆ. ಉಳಿದ ಎಲ್ಲ ಅರ್ಜಿಗಳನ್ನೂ ವಜಾ ಮಾಡಿದ್ದಾರೆ. ವಜಾ ಮಾಡಿದ ಅರ್ಜಿಗಳನ್ನು ಮತ್ತೆ ಪುನರ್ ಪರಿಶೀಲನೆ ಮಾಡಬೇಕು. ಅರಣ್ಯಾಧಿಕಾರಿಗಳು ರೈತರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು. ವಿನಾಕಾರಣ ಪ್ರಕರಣ ದಾಖಲಿಸದಂತೆ ಸೂಚಿಸಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗಳನ್ನೂ ಸರ್ಕಾರ ಬಗೆಹರಿಸಿಲ್ಲ. ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರು ಅರ್ಜಿ ನಮೂನೆ 50, 53ರಲ್ಲಿ ಅರ್ಜಿ ಸಲ್ಲಿಸಿದ್ದರು. ಮತ್ತೆ ಈಗ 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸುವ ಸಮಯದಲ್ಲೇ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಒಂದು ತಿಂಗಳು ವಿಸ್ತರಿಸಬೇಕು ಎಂದು ಕೋರಿದರು.

ADVERTISEMENT

ಹಲವು ಬಡ ರೈತರು ಬಗರ್ ಹುಕುಂ ಜಮೀನನ್ನೆ ನಂಬಿ ಬದುಕುತ್ತಿದ್ದಾರೆ. ಆ ಭೂಮಿಗೆ ಬ್ಯಾಂಕ್‌ನಿಂದ ಸಾಲವೂ ಸಿಗುವುದಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ಪರಿಹಾರವೂ ಸಿಗುವುದಿಲ್ಲ. ವಿಮೆಯೂ ಇಲ್ಲ. ಅವರ ಮಕ್ಕಳು ವಿದ್ಯಾಬ್ಯಾಸ ಮಾಡುವುದು ಕಷ್ಟವಾಗುತ್ತದೆ. ಈ ಎಲ್ಲ ಬಡ ರೈತರ ನೆರವಾಗಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹುಚ್ಚುರಾಯಪ್ಪ, ತಾಲ್ಲೂಕು ಅಧ್ಯಕ್ಷ ರೇಖಾನಾಯ್ಕ, ಮುಖಂಡರಾದ ರಾಜಪ್ಪ, ನಾಗರಾಜ್, ಶರಣಯ್ಯ, ಹೀರಾನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.