ಶಿವಮೊಗ್ಗ: ಕಳಪೆ ಗುಣಮಟ್ಟದ ಅಡಿಕೆ ವ್ಯಾಪಾರ ಜಾಲ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೆಶಕ ವಾಟಗೋಡು ಸುರೇಶ್ ಆಗ್ರಹಿಸಿದರು.
ರೈತರಿಂದ ಅಡಿಕೆ ಖರೀದಿಸುವ ವ್ಯಾಪಾರಿಗಳೇ ಅಡಿಕೆಗೆ ಹಾನಿಕಾರಕ ವಸ್ತುಗಳಾದ ರೆಡ್‌ಆಕ್ಸೈಡ್ ಮಿಶ್ರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೊರ ರಾಜ್ಯಗಳಲ್ಲಿ ಅಗ್ಗದ ದರದಲ್ಲಿ ದೊರೆಯುವ ಕಳಪೆ ಗುಣಮಟ್ಟದ ಅಡಿಕೆ ತಂದು ಮಲೆನಾಡಿನ ಗುಣಮಟ್ಟದ ಅಡಿಕೆ ಜತೆ ಬೆರೆಸುತ್ತಿದ್ದಾರೆ. ಇದರಿಂದ ಇಲ್ಲಿನ ರೈತರಿಗೆ ಸೂಕ್ತ ನೆಲೆ ಸಿಗುತ್ತಿಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಕಳಪೆ ಗುಣಮಟ್ಟದ ಅಡಿಕೆ ರವಾನಿಸಿದರೆ ಅದು ಆರೋಗ್ಯಕ್ಕೆ ಹಾನಿಕರ ಎಂದು ಬಿಂಬಿಸಲು ಸಂಶೋಧನಾ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಶಿವಮೊಗ್ಗ ಎಪಿಎಂಸಿ ಅಧಿಕಾರಿಗಳು ಮಿಶ್ರಣ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಆವಶ್ಯಕತೆ ಇರುವ ಭಾಗಗಳಲ್ಲಿ ಚೆಕ್‌ಪೋಸ್ಟ್ ತೆರೆಯಬೇಕು. ತನಿಖಾ ತಂಡ ನೇಮಿಸಬೇಕು. ಕಳಪೆ ಗುಣಮಟ್ಟದ ಅಡಿಕೆ ಖರೀದಿಸುವ ವರ್ತಕರ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗಂಗಾಧರ್, ಮಹೇಶ್, ಚಿನ್ನಯ್ಯ, ಈಶ್ವರ್, ಧನಂಜಯ, ಗುರುಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.