ADVERTISEMENT

ಸುಂದರೇಶ್ ಪುಣ್ಯಸ್ಮರಣೆ: 21ಕ್ಕೆ ವಿಶೇಷ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 11:07 IST
Last Updated 17 ಡಿಸೆಂಬರ್ 2018, 11:07 IST

ಶಿವಮೊಗ್ಗ: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಡಿ. 21ರಂದು ಬೆಳಿಗ್ಗೆ 10.30ಕ್ಕೆ ಎನ್.ಡಿ. ಸುಂದರೇಶ್ ಅವರ ಪುಣ್ಯಸ್ಮರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರೈತ ಸಂಘದ ಸಂಸ್ಥಾಪಕರು, ಧೀಮಂತ ಹೋರಾಟಗಾರರು ಆಗಿದ್ದ ಸುಂದರೇಶ್ ಅರವರ ವಿಚಾರ ಮತ್ತು ಅವರ ಹೋರಾಟ ಇಂದಿನ ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಅದಕ್ಕಾಗಿ ಎನ್.ಡಿ. ಸುಂದರೇಶ್ ಪ್ರತಿಷ್ಠಾನ, ರೆಡ್‌ಕ್ರಾಸ್‌ ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷತೆ ಶೋಭಾ ಸುಂದರೇಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಗೌರವ ಕಾರ್ಯದರ್ಶಿ ಡಾ.ವಿ.ಎಸ್.ಎಲ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಶ್ರೀಪತಿ ಹಳಗುಂದ ಅವರು ರೈತರ ಸಮಸ್ಯೆಗಳು ಹಾಗೂ ಪರಿಹಾರ ಕುರಿತು ಉಪನ್ಯಾಸ ನೀಡಲಿದ್ದಾರೆ. ಧರಣೇಂದ್ರ ದಿನಕರ್ ಹಾಗೂ ಡಾ.ಕೆ. ಸರಳ ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲ ಡಾ.ಕುಂದನ್ ಬಸವರಾಜ್ ಅಧ್ಯಕ್ಷತೆ ವಹಿಸುವರು ಎಂದು ವಿವರ ನೀಡಿದರು.

ADVERTISEMENT

ರಾಜ್ಯದಲ್ಲಿರುವ ರೈತ ಸಂಘಗಳು ಎನ್.ಡಿ. ಸುಂದರೇಶ್‌ ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತವೆ. ಆದರೆ, ಅವರ ವಿಚಾರಧಾರೆ ಅಳವಡಿಸಿಕೊಂಡಿಲ್ಲ. ಪ್ರಮುಖ ವೃತ್ತಕ್ಕೆ ಸುಂದರೇಶ್ ಅವರ ಹೆಸರಿಡಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್. ಸುದಾಂಶು, ವಿನೋದ್, ದಯಾನಂದ್, ಜೀವಿತ್ ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.