ADVERTISEMENT

ನಗರ ತೊರೆದ 3.50 ಲಕ್ಷ ಹಳ್ಳಿಗರಿಗೆ ಖಾತ್ರಿ ಕೆಲಸ: ಸಚಿವ ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:11 IST
Last Updated 25 ಜುಲೈ 2020, 12:11 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಕೊರೊನಾ ಸಂಕಷ್ಟದ ಸಮಯದಲ್ಲಿ ನಗರ, ಪಟ್ಟಣಗಳಿಂದ ಹಳ್ಳಿಗಳಿಗೆ ಮರಳಿದ 3.50 ಲಕ್ಷ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನರೇಗಾದಲ್ಲಿ ಜಿಲ್ಲೆಯಲ್ಲೂಉತ್ತಮ ಸಾಧನೆ ಮಾಡಲಾಗಿದೆ. 4 ತಿಂಗಳ ಅವಧಿಯಲ್ಲಿ 22.47 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ವರ್ಷ ಹೊಸದಾಗಿ 6,822ಜನರು ಜಾಬ್‌ಕಾರ್ಡ್ ಪಡೆದಿದ್ದಾರೆ. ₹4.80 ಕೋಟಿ ಕೂಲಿಹಣ ಪಾವತಿಸಲಾಗಿದೆ.ರಾಜ್ಯದಲ್ಲಿ 85 ಸಾವಿರಕ್ಕೂಹೆಚ್ಚಿನರೈತರ ಜಮೀನುಗಳಲ್ಲಿ ಕಂದಕ ಬದು ಹಾಗೂ 35 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಿರುವುದು ದಾಖಲೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಒಂದು ವರ್ಷದ ಅವಧಿಯಲ್ಲಿ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಲಾಗಿದೆ. ಅಂತರ್ಜಲ ಯೋಜನೆಯಡಿ ಜಿಲ್ಲೆಯಲ್ಲಿ 27,754 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.ಈಗಾಗಲೇ 1,444 ಕಾಮಗಾರಿಗಳು ಆರಂಭಗೊಂಡಿವೆ. ಜಲಾಮೃತ ಯೋಜನೆಯಡಿ ₹5.20 ಕೋಟಿ ವೆಚ್ಚದಲ್ಲಿ28 ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ₹2.40 ಕೋಟಿ ವೆಚ್ಚದಲ್ಲಿ 14 ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ. ಈ ವರ್ಷ ಜಿಲ್ಲೆಯ 281 ಜಲಮೂಲಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 181 ಕೆರೆಗಳ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ADVERTISEMENT

2,88,717 ಕುಟುಂಬಗಳಿಗೆ ಗಂಗೆ:ಪ್ರತಿ ಮನೆಗೆ ಶುದ್ಧ ನೀರು ಪೂರೈಸುವ ಮನೆಮನೆಗೆ ಗಂಗೆ ಯೋಜನೆಯಡಿ ಜಿಲ್ಲೆಯಲ್ಲಿ 2,88,717 ಕುಟುಂಬಗಳಿಗೆ ₹1,176 ಕೋಟಿ ವೆಚ್ಚದಲ್ಲಿ ವೈಯಕ್ತಿಕ ನಲ್ಲಿ ಒದಗಿಸಲು ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ ₹369 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಘನತ್ಯಾಜ್ಯ ವಿಲೇವಾರಿ: ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಇದೇ ಮೊದಲ ಬಾರಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ 50 ಗ್ರಾಮ ಪಂಚಾಯಿತಿಗಳ ಪ್ರಸ್ತಾವ ಅನುಮೋದಿಸಲಾಗಿದೆ.ವಾಹನ ಖರೀದಿ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಗ್ರಾಮೀಣ ರಸ್ತೆ ಅಭಿವೃದ್ಧಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ 3,620 ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ ₹909 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 2,063 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಪ್ರಸ್ತಾವ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.ರಾಜ್ಯದ ಎಲ್ಲಾ 6012 ಗ್ರಾಮ ಪಂಚಾಯಿತಿಗಳಲ್ಲೂಕಚೇರಿ ಕಟ್ಟಡಗಳಿಗೆ ₹4 ಲಕ್ಷವೆಚ್ಚದಲ್ಲಿ ಸೋಲಾರ್ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿಸಿಇಒ ಎಂ.ಎಲ್.ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.