ಶಿವಮೊಗ್ಗ: ‘ಹಿಂದುಳಿದ ಜನಜಾಗೃತಿ ವೇದಿಕೆ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಆ.19ರಂದು ಬೆಳಿಗ್ಗೆ 10.30ಕ್ಕೆ ಮಾಜಿ ಮುಖ್ಯಮಂತ್ರಿ, ದಿವಂಗತ ದೇವರಾಜ ಅರಸು ಅವರ ಜನ್ಮದಿನಾಚರಣೆ ಮತ್ತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ’ ಎಂದು ವೇದಿಕೆಯ ಗೌರವ ಅಧ್ಯಕ್ಷ ಎಚ್.ರಾಚಪ್ಪ ಹೇಳಿದರು.
‘ಪ್ರೆಸ್ ಟ್ರಸ್ಟ್‌ನಲ್ಲಿ ವಿಚಾರ ಸಂಕಿರಣ ನಿಗದಿಯಾಗಿದೆ. ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸುವುದು ಇದರ ಮುಖ್ಯ ಉದ್ದೇಶ. ಸಿಗಂದೂರು ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಪಿ.ರಾಮಪ್ಪ ಕಾರ್ಯಕ್ರಮ ಉದ್ಘಾಟಿಸುವರು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಪಿ.ಗಿರಿಯಪ್ಪ, ಹಿಂದುಳಿದ ಜನಜಾಗೃತಿ ವೇದಿಕೆಯ ಅಧ್ಯಕ್ಷ ತೀ.ನ. ಶ್ರೀನಿವಾಸ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಗೋಷ್ಠಿ 1ರಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಪ್ರಾಧ್ಯಾಪಕಿ ಶುಭಾ ಮರವಂತೆ ಮಾತನಾಡುವರು. ಗೋಷ್ಠಿ 2ರಲ್ಲಿ ದೇವರಾಜ ಅರಸು ಮತ್ತು ಹಿಂದುಳಿದವರ ಕಾಳಜಿ ಕುರಿತು ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಲಿದ್ದಾರೆ’ ಎಂದರು.
‘ಕಾಂತರಾಜ್ ವರದಿ ಸಿದ್ಧವಾಗಿ ಹಲವು ವರ್ಷಗಳೇ ಆಗಿವೆ. ಈ ವರದಿಯನ್ನು ಅತ್ಯಂತ ವೈಜ್ಞಾನಿಕವಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿದ್ಧಪಡಿಸಲಾಗಿದೆ. ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಂಶ ಇಟ್ಟುಕೊಂಡು ಜಾತಿ ಜನಗಣತಿ ಮಾಡಿದ್ದಾರೆ. ಆದರೆ ಯಾವ ಸರ್ಕಾರಗಳೂ ಕೂಡ ಇದನ್ನು ಜಾರಿಗೆ ತರುತ್ತಿಲ್ಲ. ಅರಸು ಅವರ ಜನ್ಮದಿನಾಚರಣೆ ಆಚರಿಸುವ ಮೂಲಕ ಕಾಂತರಾಜ್ ವರದಿ ಜಾರಿಗೊಳಿಸುವಂತೆ ಒತ್ತಾಯಿಸುತ್ತೇವೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರದಿಯನ್ನು ಶೀಘ್ರವೇ ಜಾರಿಗೊಳಿಸಬೇಕು’ ಎಂದು ತೀ.ನ.ಶ್ರೀನಿವಾಸ್ ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ವಿ.ರಾಜು, ಎಸ್.ಬಿ. ಅಶೋಕ್‌ಕುಮಾರ್, ಆರ್.ಟಿ. ನಟರಾಜ್, ಡಿ.ಬಿ. ಕೆಂಚಪ್ಪ, ಜನಮೇಜಿರಾವ್, ಸುಮಿತ್ರಾ, ನಾಗರತ್ನ, ಮನೋಹರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.