ADVERTISEMENT

’ಎಂಎಡಿಬಿ ಸದಸ್ಯರಿಗೆ ಅನುದಾನವನ್ನೇ ಕೊಟ್ಟಿಲ್ಲ’

ಸರ್ಕಾರದ ವಿರುದ್ಧ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:04 IST
Last Updated 11 ಜುಲೈ 2025, 4:04 IST
ಡಿ.ಎಸ್.ಅರುಣ್
ಡಿ.ಎಸ್.ಅರುಣ್   

ಶಿವಮೊಗ್ಗ: ‘ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸದಸ್ಯರಿಗೆ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಅನುದಾನವನ್ನೇ ಕೊಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆರೋಪಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

13 ಜಿಲ್ಲೆಗಳ 85 ಶಾಸಕರು ಹಾಗೂ ಸ್ಥಳೀಯ ಸಂಸ್ಥೆ ಸದಸ್ಯರು ಸೇರಿ 104 ಜನರು ಮಂಡಳಿಯನ್ನು ಪ್ರತಿನಿಧಿಸುತ್ತಿದ್ದಾರೆ. 2019ರಿಂದ 2023ರವರೆಗೆ 84 ಸದಸ್ಯರಿಗೆ ಪ್ರತೀ ವರ್ಷ ತಲಾ ₹1 ಕೋಟಿ ಪ್ರದೇಶಾಭಿವೃದ್ಧಿ ಅನುದಾನ ಹಂಚಿಕೆ ಮಾಡಲಾಗಿತ್ತು. ಇದು ಮಲೆನಾಡಿನಲ್ಲಿ ನೂರಾರು ಕಾಲು ಸಂಕ ಸೇರಿದಂತೆ ಬೇರೆ ಬೇರೆ ಅಭಿವೃದ್ಧಿ ಕಾರ್ಯಕ್ಕೆ ನೆರವಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ₹1 ಕೋಟಿ ಅನುದಾನವನ್ನು ₹35 ಲಕ್ಷಕ್ಕೆ ಕಡಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಾವು ಕ್ರಿಯಾ ಯೋಜನೆ ಸಲ್ಲಿಸಿ ಎರಡು ವರ್ಷವಾದರೂ ಇದುವರೆಗೆ 2024ರಿಂದ 2026ನೇ ಸಾಲಿನವರೆಗೆ ಅನುದಾನ ಬಂದಿಲ್ಲ. ಈಗ ಮಂಡಳಿಯನ್ನು 10 ಜಿಲ್ಲೆಗೆ ಸೀಮಿತಗೊಳಿಸಿ 64 ಜನ ಸದಸ್ಯರಿಗೆ ಕಡಿತ ಮಾಡಿದ್ದಾರೆ. ಆ ಪ್ರಕಾರ ತಲಾ ₹46 ಲಕ್ಷ ಅನುದಾನ ಬರಬೇಕಿದೆ. ಅದನ್ನು ಕೂಡ ನಿಲ್ಲಿಸಿದ್ದಾರೆ’ ಎಂದು ದೂರಿದರು.

ಮೂರು ತಿಂಗಳಿಗೊಮ್ಮೆ ಮಂಡಳಿ ಸದಸ್ಯರ ಸಭೆ ನಡೆಸಬೇಕು ಎಂಬ ಕಾನೂನಿದ್ದರೂ 10 ತಿಂಗಳಾದರೂ ನಡೆಸಲಿಲ್ಲ. ಸಚಿವರು ಮತ್ತು ಅಧಿಕಾರಿಗಳ ವಿವೇಚನೆಯಂತೆ ಅಧ್ಯಕ್ಷರ ಗೈರುಹಾಜರಿಯಲ್ಲಿ ಅನುದಾನ ಬಳಸುತ್ತಿರುವುದು ಕೂಡ ಅನಧಿಕೃತ ಎಂದರು.

ಪ್ರಮುಖರಾದ ಎಸ್. ದತ್ತಾತ್ರಿ, ಕೆ.ಜಿ. ಕುಮಾರಸ್ವಾಮಿ, ಸತೀಶ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.

ಮಂಜುನಾಥಗೌಡ ಪದಚ್ಯುತಿ ಏಕಿಲ್ಲ: ಅರುಣ್ ಪ್ರಶ್ನೆ

‘ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ನಕಲಿ ಚಿನ್ನ ಅಡವಿಟ್ಟ ಪ್ರಕರಣದಲ್ಲಿ ಬ್ಯಾಂಕ್‌ನ ಅಧ್ಯಕ್ಷರೂ ಆದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಈಚೆಗೆ ಬಂಧನಕ್ಕೊಳಗಾಗಿದ್ದರು. ಹೀಗಾಗಿ ಸರ್ಕಾರ ಅವರನ್ನು ಪದಚ್ಯುತಿಗೊಳಿಸಬೇಕಿತ್ತು. ತನಿಖೆ ಮುಗಿದು ಅವರು ನಿರ್ದೋಷಿ ಎಂದಾದಲ್ಲಿ ಮತ್ತೆ ಅವರನ್ನು ನೇಮಕ ಮಾಡಬಹುದಿತ್ತು. ಆ ಕೆಲಸವನ್ನು ಸರ್ಕಾರ ಇದುವರೆಗೂ ಮಾಡಿಲ್ಲ’ ಎಂದು ಡಿ.ಎಸ್.ಅರುಣ್ ಆರೋಪಿಸಿದರು. ‘ಮಂಡಳಿಯ 1991ರ ನಿಯಮದನ್ವಯ ಅಧ್ಯಕ್ಷರ ಗೈರು ಹಾಜರಿಯಲ್ಲಿ ಸರ್ವ ಸದಸ್ಯರ ಸಭೆ ನಡೆಸುವಂತಿಲ್ಲ. ಆದರೆ ಈಚೆಗೆ ಸಚಿವ ಡಿ.ಸುಧಾಕರ್ ನಿಯಮಾವಳಿ ಮೀರಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನಿಯಮಬಾಹಿರವಾಗಿ ಸಭೆ ನಡೆಸಿದ್ದಾರೆ. ಸದಸ್ಯರ ಗಮನಕ್ಕೆ ತಾರದೇ ₹1.80 ಕೋಟಿ ವೆಚ್ಚದಲ್ಲಿ ಎಂಎಡಿಬಿ ಕಚೇರಿಯ ನವೀಕರಣ ನಡೆಸಲಾಗುತ್ತದೆ. 2021-22ರಲ್ಲಿಯೂ ಕಚೇರಿ ನವೀಕರಣಗೊಂಡಿತ್ತು. ಸದಸ್ಯರಿಗೇ ಅನುದಾನದ ಕೊರತೆ ಇದ್ದಾಗ ಅವರ ಗಮನಕ್ಕೆ ತಾರದೇ ಸಭೆಯಲ್ಲೂ ಚರ್ಚಿಸದೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಚೇರಿ ನವೀಕರಣ ಮಾಡುವ ಅಗತ್ಯವೇನಿತ್ತು?’ ಎಂದು ಡಿ.ಎಸ್.ಅರುಣ್ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.