
ಶಿವಮೊಗ್ಗ: ಭಗವದ್ಗೀತಾ ಅಭಿಯಾನದ ಸಮಾರೋಪದ ಭಾಗವಾಗಿ ರಾಜ್ಯ ಮಟ್ಟದ ‘ಮಹಾಸಮರ್ಪಣೆ’ ಸಮಾರಂಭ ನ. 30ರಂದು ಬೆಳಿಗ್ಗೆ 10.30ಕ್ಕೆ ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
‘ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಂಕಲ್ಪದಂತೆ ಶಿವಮೊಗ್ಗ ಜಿಲ್ಲೆಯಲ್ಲೇ ಅಂದಾಜು 350 ಶಾಲೆ, ಕಾಲೇಜುಗಳಲ್ಲಿ 5ನೇ ತರಗತಿಯಿಂದ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ 11ನೇ ಅಧ್ಯಾಯದ ಎಲ್ಲ ಶ್ಲೋಕಗಳನ್ನು ಕಂಠಪಾಠ ಮಾಡಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ 15,000 ವಿದ್ಯಾರ್ಥಿಗಳೂ ಸೇರಿ ಅಂದಾಜು 25,000 ಜನರು ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು 11ನೇ ಅಧ್ಯಾಯದ ಶ್ಲೋಕಗಳನ್ನು ಏಕಕಾಲದಲ್ಲಿ ಪಠಿಸಲಿದ್ದಾರೆ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಹರಿಹರಪುರದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಬೆಕ್ಕಿನಕಲ್ಮಠದ ಮಲ್ಲಿಕಾಜುನ ಮುರುಘರಾಜೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ನಾದಮಯಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್ ಸಮಾರಂಭ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ‘ಗೀತಾ ಲಾವಣೈ’ ಧ್ವನಿ ಮುದ್ರಿಕೆ ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ‘ಸ್ವರ್ಣವಲ್ಲೀ ಪ್ರಭಾ’ ವಿಶೇಷ ಸಂಚಿಕೆ ಬಿಡುಗಡೆಗೊಳಿಸುವರು. ಮಧ್ಯಾಹ್ನ 3 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಜಿ. ಭಟ್ಟ, ಪ್ರಧಾನ ಕಾರ್ಯದರ್ಶಿ ಕೆ.ಈ.ಕಾಂತೇಶ್, ಸದಸ್ಯರಾದ ಉಮೇಶ್ ಆರಾಧ್ಯ, ಮಂಜುನಾಥ ಶರ್ಮಾ, ಸುಧೀಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.