ADVERTISEMENT

‘ವಿದ್ಯುತ್ ಖಾಸಗೀಕರಣ, ರೈತರ ಮರಣ ಶಾಸನ’

ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ; ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:29 IST
Last Updated 27 ಸೆಪ್ಟೆಂಬರ್ 2022, 4:29 IST
ಶಿವಮೊಗ್ಗದಲ್ಲಿ ಸೋಮವಾರ ರೈತಸಂಘ ಹಾಗೂ ಹಸಿರುಸೇನೆ ಅಶ್ರಯದಲ್ಲಿ ನಡೆದ ರೈತರ ಪ್ರತಿಭಟನೆಯ ನೋಟ
ಶಿವಮೊಗ್ಗದಲ್ಲಿ ಸೋಮವಾರ ರೈತಸಂಘ ಹಾಗೂ ಹಸಿರುಸೇನೆ ಅಶ್ರಯದಲ್ಲಿ ನಡೆದ ರೈತರ ಪ್ರತಿಭಟನೆಯ ನೋಟ   

ಶಿವಮೊಗ್ಗ: ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸಿ ರೈತರ ಐಪಿ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹುನ್ನಾರ ನಡೆಸಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ರೈತರು ನೀರಾವರಿಗಾಗಿ 25 ಲಕ್ಷಕ್ಕೂ ಅಧಿಕ ಐಪಿ ಸೆಟ್ ಗಳನ್ನು ಬಳಸುತ್ತಿದ್ದು, ಇದಕ್ಕಾಗಿ ಕೋಟ್ಯಂತರ ರೂಪಾಯಿ ಸಾಲವಾಗಿ ಪಡೆದು ಬಂಡವಾಳ ಹೂಡಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸ ರೈತರೇ ಮಾಡಿ ಲಕ್ಷಾಂತರ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಈಗಾಗಲೇ ಸಂಸತ್‌ನಲ್ಲಿ ವಿದ್ಯುತ್‌ ಖಾಸಗೀಕರಣ ಬಿಲ್ ಮಂಡಿಸಿದ್ದು, ವಿದ್ಯುತ್ ಉತ್ಪಾದನೆ, ದರ ನಿಗದಿ ಹಾಗೂ ಸೇವಾ ವಲಯವನ್ನು ಬಂಡವಾಳಶಾಹಿಗಳಿಗೆ ಕೊಟ್ಟು ರೈತರ ಮರಣಶಾಸನ ಬರೆಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಆದರೆ, ರಾಜ್ಯ ಸರ್ಕಾರ ಕೂಡ ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ವಿಮಾ ಕಂಪನಿಗಳಿಗೆ ಬೆಳೆ ವಿಮೆ ಕಂತುಗಳ ಹಣವನ್ನು ರೈತರ ಪರವಾಗಿ ಸರ್ಕಾರವೇ ತುಂಬಬೇಕು. ಕೃಷಿ ಭೂಮಿಯ ಸಬಲೀಕರಣಕ್ಕೆ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ADVERTISEMENT

ಕೇಂದ್ರ ಸರ್ಕಾರ ರೈತರು ಆಹಾರ ಉತ್ಪಾದನೆಗಾಗಿ ಪಡೆದ ಕೃಷಿ ಸಂಬಂಧಿತ ಸಾಲಗಳನ್ನು ಒಟಿಎಸ್ ಮೂಲಕ ರಾಜೀ ಸಂಧಾನ ಸೂತ್ರದಲ್ಲಿ ಸಾಲ ತೀರುವಳಿಗೆ ಅವಕಾಶ ನೀಡಿದೆ. ಆದರೆ, ನಂತರದ ಸಾಲ ತೀರುವಳಿ ಮಾಡಿದ ರೈತರ ಖಾತೆಯನ್ನು ಸಿಬಿಲ್‌ನಲ್ಲಿ ಜೋಡಣೆ ಮಾಡಿ ಮುಂದೆ ಆ ರೈತರ ಕುಟುಂಬಕ್ಕೆ ಸಾಲ ಪಡೆಯುವ ಅವಕಾಶಗಳೇ ಇಲ್ಲದಂತೆ ಮಾಡಲಾಗಿದೆ. ಆದ್ದರಿಂದ ಕೃಷಿ ಸಂಬಂಧಿತ ಸಾಲಗಳನ್ನು ಸಿಬಿಲ್ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ಟಿ. ಗಂಗಾಧರ್, ಯಶವಂತರಾವ್ ಘೋರ್ಪಡೆ, ಹೆಚ್. ಜಯಪ್ಪಗೌಡ, ಡಿ.ವಿ. ವೀರೇಶ್, ವಿಜಯಕುಮಾರ್ ಪಾಟೀಲ್, ಪರಮೇಶ್ವರಪ್ಪ, ಕೆ.ಎಸ್. ಪುಟ್ಟಪ್ಪ, ಜಿ.ಆರ್. ಸಣ್ಣರಂಗಪ್ಪ, ಸೀನಪ್ಪ, ಕೆ.ಹೆಚ್. ಪಾಂಡುರಂಗಪ್ಪ, ಗೋಪಾಲಪ್ಪ, ಜಗದೀಶ್ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.