ADVERTISEMENT

ಖಾಸಗೀಕರಣದಿಂದ ಸರ್ಕಾರಗಳ ಶಕ್ತಿ ಕುಂಠಿತ: ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 2:48 IST
Last Updated 13 ಆಗಸ್ಟ್ 2022, 2:48 IST
ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಐಗಳಕೊಪ್ಪದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯಮಟ್ಟದ ಅಧ್ಯಯನ ಶಿಬಿರವನ್ನು ಶುಕ್ರವಾರ ಕೂಡ್ಲಿ ಭಾರಂಗಿ ಮಠದ ಸಿದ್ದವೀರ ಸ್ವಾಮೀಜಿ ಉದ್ಘಾಟಿಸಿದರು. ಕೋಡಿಹಳ್ಳಿ ಚಂದ್ರಶೇಖರ್, ಡಾ.ಸರ್ಫ್ರಾಜ್ ಚಂದ್ರಗುತ್ತಿ, ಮಂಜುನಾಥ ಗೌಡ ಇದ್ದರು.
ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಐಗಳಕೊಪ್ಪದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯಮಟ್ಟದ ಅಧ್ಯಯನ ಶಿಬಿರವನ್ನು ಶುಕ್ರವಾರ ಕೂಡ್ಲಿ ಭಾರಂಗಿ ಮಠದ ಸಿದ್ದವೀರ ಸ್ವಾಮೀಜಿ ಉದ್ಘಾಟಿಸಿದರು. ಕೋಡಿಹಳ್ಳಿ ಚಂದ್ರಶೇಖರ್, ಡಾ.ಸರ್ಫ್ರಾಜ್ ಚಂದ್ರಗುತ್ತಿ, ಮಂಜುನಾಥ ಗೌಡ ಇದ್ದರು.   

ಸಾಗರ: ‘ಖಾಸಗೀಕರಣ ನೀತಿಯಿಂದ ಸರ್ಕಾರಗಳ ಶಕ್ತಿ ಕುಂಠಿತಗೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುತ್ತಿರುವ ಸಂಗತಿ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ತಾಲ್ಲೂಕಿನ ತಾಳಗುಪ್ಪ ಸಮೀಪದ ಐಗಳಕೊಪ್ಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಎರಡು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈಲ್ವೆ, ವಿಮಾನ ನಿಲ್ದಾಣ, ಬಂದರು ಗಳನ್ನು ಕೂಡ ಖಾಸಗಿಯವರಿಗೆ ವಹಿಸಲು ಸರ್ಕಾರ ಮುಂದಾಗಿರುವುದು ನಮ್ಮನ್ನು ಆಳುತ್ತಿರುವವರು ಯಾವ ಪ್ರಮಾಣದಲ್ಲಿ ಖಾಸಗೀಕರಣಕ್ಕೆ ಒತ್ತು ನೀಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಯಾಗಿದೆ. ವಿದ್ಯುತ್ ಕ್ಷೇತ್ರವನ್ನು ಕೂಡ ಸಂಪೂರ್ಣವಾಗಿ ಖಾಸಗೀಕರಣ ಗೊಳಿಸಲು ಸರ್ಕಾರ ಸಿದ್ಧವಾಗಿದೆ’ ಎಂದರು.

ADVERTISEMENT

ಹೆಚ್ಚು ಮಳೆಯಾದರೂ ತೊಂದರೆ ಆಗುವುದು ರೈತರಿಗೆ. ಕಡಿಮೆ ಮಳೆಯಾದರೂ ಅದೇ ಸ್ಥಿತಿ ಇರುತ್ತದೆ. ಮಳೆ ಹದವಾಗಿ ಬಂದು ಸಮೃದ್ಧವಾಗಿ ಬೆಳೆ ತೆಗೆದರೂ ಬೆಲೆ ಕುಸಿತಗೊಂಡು ರೈತರಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಈ ಸ್ಥಿತಿಯನ್ನು ಸುಧಾರಿಸಲು ಯಾವ ರಾಜಕೀಯ ಪಕ್ಷವೂ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ ಎಂದು ದೂರಿದರು.

ಜನಪರ ಚಳವಳಿಗಳ ನೇತೃತ್ವ ವಹಿಸುವ ಪ್ರಮುಖರ ಮೇಲೆ ಅಪಪ್ರಚಾರ ಮಾಡುವ ಮೂಲಕ ಚಳವಳಿಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಪ್ರಭುತ್ವ ಮಾಡುತ್ತಿದೆ. ಇಂತಹ ಕೆಲಸಗಳ ಮೂಲಕ ರೈತ ಸಂಘಟನೆಯನ್ನು ಒಡೆಯಲು ಅಥವಾ ಅದರ ಶಕ್ತಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕೃಷಿಯ ಪಾರಂಪರಿಕ ತಿಳಿವಳಿಕೆಯೇ ಜಗತ್ತಿನ ಸರ್ವಶ್ರೇಷ್ಠ ಜ್ಞಾನವಾಗಿದೆ. ಪ್ರಕೃತಿಯ ವಿಕೋಪಗಳನ್ನು ಲೆಕ್ಕಿಸದೆ ಸಮಾಜದ ಏಳಿಗೆಗಾಗಿ ದುಡಿಯುವ ರೈತರ ಬದುಕು ಹಸನಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ’ ಎಂದುಶಿಬಿರವನ್ನು ಉದ್ಘಾಟಿಸಿದ ಕೂಡ್ಲಿ ಭಾರಂಗಿ ಮಠದ ಸಿದ್ದವೀರ ಸ್ವಾಮೀಜಿ ಹೇಳಿದರು.

ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ, ರೈತ ಸಂಘದ ಪ್ರಮುಖರಾದ ಮಂಜುನಾಥ ಗೌಡ, ರಾಘವೇಂದ್ರ, ಹನುಮಂತಪ್ಪ, ಮಾಲತೇಶ್ ಪೂಜಾರಿ, ಕಾರ್ತಿಕ್, ಎ.ಎನ್.ನಾಗರಾಜ್, ಉಮೇಶ್ ಪಾಟೀಲ್ ಇದ್ದರು.

ರಾಘವೇಂದ್ರ ನಾಯ್ಕ್ ಶಿರಸಿ ಸ್ವಾಗತಿಸಿದರು. ವೀರಭದ್ರ ನಾಯ್ಕ್ ಮಾತನಾಡಿದರು. ರಾಘವೇಂದ್ರ ನಾಯ್ಕ್ ಕವಚೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.