ADVERTISEMENT

ಪಿಎಲ್‌ಡಿ ಬ್ಯಾಂಕ್ ಸಾಲ ಮನ್ನಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 10:31 IST
Last Updated 11 ಅಕ್ಟೋಬರ್ 2018, 10:31 IST
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು, ಪದಾಧಿಕಾರಿಗಳು ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು, ಪದಾಧಿಕಾರಿಗಳು ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ರಾಜ್ಯದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್)ಗಳಲ್ಲಿನ ರೈತರ ಸಾಲವನ್ನೂ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ವಿವಿಧ ಬ್ಯಾಂಕ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಚುನಾವಣಾ ಪೂರ್ವದಲ್ಲಿ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಎಲ್ಲ ಪಕ್ಷಗಳೂ ಭರವಸೆ ನೀಡಿದ್ದವು. ಈಗ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೀಡಿದ್ದ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ 128 ಬ್ಯಾಂಕುಗಳ ಮೂಲಕ ಸಾವಿರಾರು ರೈತರು ದೀರ್ಘಾವಧಿ ಕೃಷಿ ಸಾಲ ಪಡೆದಿದ್ದಾರೆ. ಹಲವರು ಸುಸ್ತಿದಾರರಾಗಿದ್ದಾರೆ. ಪ್ರಸ್ತುತ ಸಾಲ ಮನ್ನಾ ಪ್ರಯೋಜನ ವ್ಯವಸಾಯ ಸೇವಾ ಸಹಕಾರ ಸಂಘಗಳ ಬೆಳೆ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಕೃಷಿ ಸಾಲಕ್ಕೆ ಅನ್ವಯವಾಗುತ್ತದೆ. ಪೀಕಾರ್ಡ್‌ ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆದ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು.

ADVERTISEMENT

ಸರ್ಕಾರದ ಆದೇಶದ ಪ್ರಕಾರ ರೈತರ ಸಾಲ ವಸೂಲಾತಿಗಾಗಿ ನೋಟಿಸ್ ನೀಡುವಂತಿಲ್ಲ. ಪೀಕಾರ್ಡ್ ಬ್ಯಾಂಕುಗಳು ಶೇ 70ರಷ್ಟು ಸಾಲ ವಸೂಲಾತಿ ಸಾಧಿಸದಿದ್ದರೆ ಹೊಸ ಸಾಲ ನೀಡಲು ನಬಾರ್ಡ್‌ ಅವಕಾಶ ನೀಡುವುದಿಲ್ಲ. ಇದು ಬ್ಯಾಂಕ್ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಿಬ್ಬಂದಿಗೆ ವೇತನ ನೀಡುವುದಕ್ಕೂ ಹಣ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ಸರ್ಕಾರ ಸಾಲ ಮನ್ನಾ ಮಾಡಬೇಕು. ಇಲ್ಲವೇ ಸಾಲ ವಸೂಲಾತಿಗೆ ನೋಟಿಸ್ ನೀಡಲು ಅನುಮತಿ ನೀಡಬೇಕು. ಹೊಸ ಸಾಲ ವಿತರಣೆಗೆ ಅನುಮತಿ ನೀಡಬೇಕು. ರೈತರ ಹಿತರಕ್ಷಣೆ ಜತೆಗೆ ಬ್ಯಾಂಕಿನ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬ್ಯಾಂಕ್‌ ಪ್ರಮುಖರಾದ ಎಚ್.ಎನ್. ಲೋಕೇಶ್ವರಪ್ಪ, ವಿಜಯದೇವ, ಶಾಂತ, ಸುಜಾತಾ, ಮಹಾಬಲ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.