ADVERTISEMENT

ವಿದ್ಯುತ್ ಖಾಸಗೀಕರಣ ವಿರೋಧಿಸಿ ಖಂಡನಾ ಸಭೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 12:14 IST
Last Updated 11 ಆಗಸ್ಟ್ 2021, 12:14 IST
ಸೊರಬದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ತಾಲ್ಲೂಕು ಜೆಡಿಎಸ್ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಜೆಡಿಎಸ್ ಘಟಕದ ಅಧ್ಯಕ್ಷ ಕೆ.ಅಜ್ಜಪ್ಪ ಮಾತನಾಡಿದರು
ಸೊರಬದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ತಾಲ್ಲೂಕು ಜೆಡಿಎಸ್ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಜೆಡಿಎಸ್ ಘಟಕದ ಅಧ್ಯಕ್ಷ ಕೆ.ಅಜ್ಜಪ್ಪ ಮಾತನಾಡಿದರು   

ಸೊರಬ: ‘ವಿದ್ಯುತ್ ಖಾಸಗೀಕರಣದಿಂದ ದೇಶದ ರೈತರಿಗೆ ಅನ್ಯಾಯ ಆಗುವುದನ್ನು ಮನಗಂಡು ಕೇಂದ್ರ ಸರ್ಕಾರ ಖಾಸಗೀಕರಣ ನೀತಿ ಕೈಬಿಡಬೇಕು’ ಎಂದು ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಒತ್ತಾಯಿಸಿದರು.

ಬುಧವಾರ ಪಟ್ಟಣದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ತಾಲ್ಲೂಕು ಜೆಡಿಎಸ್ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಮಾತನಾಡಿದರು.

‘ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ತಾರತಮ್ಯ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ವಿದ್ಯುತ್ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಕಂಪನಿಗಳು ಖರೀದಿಸಿ ಅಭಿವೃದ್ಧಿ ಪಡಿಸುತ್ತವೆ ಎಂದಾದರೆ ಸರ್ಕಾರಕ್ಕೆ ಏಕೆ ಸಾಧ್ಯವಾಗುವುದಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

ಜೆಡಿಎಸ್ ಬ್ಲಾಕ್ ಅಧ್ಯಕ್ಷ ಕೆ.ಅಜ್ಜಪ್ಪ, ‘ಹಲವಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ತಾಲ್ಲೂಕಿನ ಜೇಡಗೇರಿ, ಮಾವಿನಬಳ್ಳಿಕೊಪ್ಪ, ಶಿಡ್ಡೆಹಳ್ಳಿ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರ ಸುಮಾರು 2 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ನೀಡಲು ಶಾಸಕರು ಮುಂದಾಗಬೇಕು. ಬಡವರನ್ನು ಒಕ್ಕಲೆಬ್ಬಿಸಲು ಮುಂದಾದರೆ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾಗಿ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ದೂರಿದ ಅವರು, ತಾಲ್ಲೂಕಿನಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಕಾಂಗ್ರೆಸ್, ಬಿಜೆಪಿಯಲ್ಲಿರುವ ಮೂಲ ಜೆಡಿಎಸ್ ಕಾರ್ಯಕರ್ತರು ಮರಳಿ ಜೆಡಿಎಸ್ ಸೇರುವಂತೆ ಮನವಿ ಮಾಡಿದರು.

ಬಸವನಗೌಡ, ಶಿವಪ್ಪ, ಮಂಜುನಾಥ್, ಪ್ರಶಾಂತ ತತ್ತೂರು, ಉಷಾ ಕುಮಾರ್, ಆನಂದ ದ್ಯಾವಸ, ನಾರಾಯಣಪ್ಪ, ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.