ಭದ್ರಾವತಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ನೀತಿಗಳನ್ನು ಖಂಡಿಸಿ ನಗರ ಮಂಡಲದಿಂದ ಬಸ್ ನಿಲ್ದಾಣದ ಮುಂಭಾಗ ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
‘ಕಾಂಗ್ರೆಸ್ ಸರ್ಕಾರ ಹಲವು ಹಗರಣಗಳಲ್ಲಿ ಸಿಲುಕಿದೆ. ವಾಲ್ಮೀಕಿ ನಿಗಮಕ್ಕೆ ಮೀಸಲಾದ ₹187 ಕೋಟಿ ಹಣವನ್ನು ಲೂಟಿ ಮಾಡಿದೆ. ಮೂಡಾ ಹರಗಣ, ಇತ್ತೀಚಿನ ಹೊಸ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕರಣಗಳಲ್ಲಿ ಹಗರಣ ನಡೆದಿದೆ’ ಎಂದು ಮಂಡಲ ಅಧ್ಯಕ್ಷ ಧರ್ಮಪ್ರಸಾದ್ ಆರೋಪಿಸಿದರು.
ಹಾಲು, ಡೀಸೆಲ್ ಬೆಲೆ ಏರಿಕೆ ಜೊತೆಗೆ ದಿನ ಬಳಕೆಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಪೂರೈಕೆಗಾಗಿ ಸಾಮಾನ್ಯ ಜನರ ಮೇಲೆ ಬೆಲೆ ಏರಿಕೆಯ ಪ್ರಹಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರನ್ನು ರಕ್ಷಿಸಬೇಕಾದ ಸರ್ಕಾರ ಭಕ್ಷಣೆಗೆ ಮುಂದಾಗಿದೆ ಎಂದು ಮುಖಂಡ ತೀರ್ಥಯ್ಯ ಟೀಕಿಸಿದರು.
ಜಿಲ್ಲಾ ಉಪಾಧ್ಯಕ್ಷ ಆನಂದ್ ಕುಮಾರ್ ಜಿ., ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ, ಪ್ರಮುಖರಾದ ಸತೀಶ್, ರಾಜ್ ಶೇಖರ್, ಶಿವಮೂರ್ತಿ, ರಘು ರಾವ್, ನಿರಂಜನ್ ಗೌಡ, ಧನುಷ್ ಬೋಸ್ಲೆ, ಆಟೋ ಮೂರ್ತಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.