ADVERTISEMENT

ಅಧಿಕಾರಿಗಳ ವರ್ತನೆ ಖಂಡಿಸಿ ಕಿಮ್ಮನೆ ನಡಿಗೆ

ಹುಂಚ ಹೋಬಳಿಯ ಹಡ್ಲುಬೈಲು: ಮನೆ ನೆಲಸಮಗೊಳಿಸಿದ ಪ್ರಕರಣ: 7 ಕಿ.ಮೀ. ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 2:56 IST
Last Updated 7 ಸೆಪ್ಟೆಂಬರ್ 2022, 2:56 IST
ಕಂದಾಯ ಅಧಿಕಾರಿಗಳ ದುಂಡಾ ವರ್ತನೆಯನ್ನು ಖಂಡಿಸಿ ಕಿಮ್ಮನೆರತ್ನಾಕರ್ ಪಾದಯಾತ್ರೆ ನಡೆಸಿದರು
ಕಂದಾಯ ಅಧಿಕಾರಿಗಳ ದುಂಡಾ ವರ್ತನೆಯನ್ನು ಖಂಡಿಸಿ ಕಿಮ್ಮನೆರತ್ನಾಕರ್ ಪಾದಯಾತ್ರೆ ನಡೆಸಿದರು   

ರಿಪ್ಪನ್‌ಪೇಟೆ: ಹುಂಚ ಹೋಬಳಿಯ ಹಡ್ಲುಬೈಲಿನ ಜೀವನ್ ಎಂಬುವವರ ಮನೆ ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ದುಂಡಾ ವರ್ತನೆ ಖಂಡಿಸಿ ಮಂಗಳವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ನೂರಾರು ಬೆಂಬಲಿಗರೊಂದಿಗೆ ಮನೆ ನೆಲಸಮಗೊಂಡ ಜಾಗದಿಂದ ಹೊಂಬುಜ ನಾಡ ಕಚೇರಿವರೆಗೆ ಸುಮಾರು 7 ಕಿ.ಮೀ. (ನಡಿಗೆ) ಪಾದಯಾತ್ರೆ ನಡೆಸಿದರು.

ನಂತರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ‘ರಾಜ್ಯ ಸರ್ಕಾರ ನಿವೇಶನ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡಬೇಕು. ಇದು ನಿಯಮ. ಈಗಿನ ಬಿಜೆಪಿ ಸರ್ಕಾರ ಬಡತನ ಹತ್ತಿಕ್ಕುವ ಬದಲು ಬಡವರ ಬದುಕಿನ ಆಶ್ರಯ ಸೌಧಗಳನ್ನು ಕೆಡವಿ ಹಾಕಿ ಕಡು ಬಡವರನ್ನೇ ಸಂಪೂರ್ಣ ನಿರ್ನಾಮ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
ಸರ್ಕಾರದ ಈ ನಡೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ’ ಎಂದು ಕಟುವಾಗಿ ಟೀಕಿಸಿದರು.

‘ಹಡ್ಲುಬೈಲು ಗ್ರಾಮದ ಸರ್ವೆ ನಂ. 101ರಲ್ಲಿ ಜೀವನ್ ಕುಟುಂಬಸ್ಥರು ವಿದ್ಯುತ್ ಸಂಪರ್ಕ ಪಡೆದು ನಿರ್ಮಿಸಿದ ಮನೆಯನ್ನು ಕಂದಾಯ ಅಧಿಕಾರಿಗಳು ಏಕಾಏಕಿ ಅಕ್ರಮ ಒತ್ತುವರಿ ಎಂದು ಜೆಸಿಬಿ ಯಂತ್ರ ಬಳಸಿ ನೆಲಸಮಗೊಳಿಸಿದ ಕ್ರಮ ಖಂಡನೀಯ. ಸರ್ಕಾರ ತಕ್ಷಣ ಕಂದಾಯ ಭೂಮಿಯನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪಾದಯಾತ್ರೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎರಗಿ ಉಮೇಶ್, ಮುಡುಬ ರಾಘವೇಂದ್ರ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಪುಟ್ಟ ಬಿದ್ಲು ರಾಘವೇಂದ್ರ, ಹುಂಚ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸುಣ್ಣಕಲ್ಲು ಗುರುರಾಜ್, ಕಡಸೂರು ಉಲ್ಲಾಸ್ ಭಟ್, ಹೊಸಕೊಪ್ಪ ಚೇತನ್, ಹುಲ್ಲತ್ತಿ ದಿನೇಶ್, ರಾಜಶೇಖರ್, ಮಹೇಶ್ ಗೌಡ, ಲೇಖನಮೂರ್ತಿ, ನಾಗರಾಜ ರೆಡ್ಡಿ, ಅನಿಲ್, ಕೇಶವ, ಮಂಜಣ್ಣ, ಸುಮತಿ, ಲಕ್ಷ್ಮಮ್ಮ, ಜ್ಯೋತಿ, ಲೋಲಾಕ್ಷಿ, ಗ್ರಾಮ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.