ಸಾಗರ: ಚಂದನವನದ ನಟ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರ ನಿಧನದ ಸುದ್ದಿಯನ್ನು ಕೇಳುತ್ತಿದ್ದಂತೆ ತಾಲ್ಲೂಕಿನ ಜನರು ಶೋಕ ಸಾಗರದಲ್ಲಿ ಮುಳುಗಿದರು.
ಸರ್ಕಾರಿ ಕಚೇರಿಗಳಲ್ಲಿ, ಹೋಟೆಲ್‌ಗಳಲ್ಲಿ, ಅಂಗಡಿಗಳಲ್ಲಿ ಹೀಗೆ ಎಲ್ಲಿ ನೋಡಿದರೂ ಪುನೀತ್ ಸಾವಿನ ಸುದ್ದಿಯ ಕುರಿತು ಚರ್ಚೆ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವ ನಟನ ಅಕಾಲಿಕ ಮರಣಕ್ಕೆ ಪ್ರತಿಯೊಬ್ಬರೂ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದರು.
ಪುನೀತ್ ಅವರ ನಿಧನಕ್ಕೆ ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹರತಾಳು ಸಂತಾಪ ಸೂಚಿಸಿದ್ದಾರೆ. ‘ಇತ್ತೀಚೆಗೆ ನಡೆದ ನನ್ನ ಪುತ್ರಿಯ ಮದುವೆ ಸಮಾರಂಭದಲ್ಲಿ ಪುನೀತ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪುನೀತ್ ಅವರಿಗೆ ನಾನು ಸರ್ ಎಂದು ಸಂಬೋಧಿಸಿದ್ದೆ. ಅದಕ್ಕೆ ಅವರು ‘ನೀವು ಹಾಗೆಲ್ಲ ಸರ್ ಎಂದು
ಕರೆಯಬಾರದು. ನೀವೆಲ್ಲಾ ನನ್ನ ಬಂಧುಗಳು’ ಎಂದು ವಿನೀತರಾಗಿ ಹೇಳಿದ್ದನ್ನು ಹಾಲಪ್ಪ ಅವರು ನೆನಪಿಸಿಕೊಂಡಿದ್ದಾರೆ.
ಬೇಳೂರು ಕಂಬನಿ: ಪುನೀತ್ ಅವರ ಅಗಲಿಕೆಗೆ ಕ್ಷೇತ್ರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕಂಬನಿ ಮಿಡಿದಿದ್ದಾರೆ. ‘ಪುನೀತ್ ಓರ್ವ ಶ್ರೇಷ್ಠ ನಟ ಮಾತ್ರವಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದ ಕಲಾವಿದ ಎಂಬುದನ್ನು ಮರೆಯುವಂತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಇಲ್ಲಿನ ಸಾಗರ್ ಹೋಟೆಲ್ ವೃತ್ತದಲ್ಲಿ ಶುಕ್ರವಾರ ಸಂಜೆ ವಿವಿಧ ಸಂಘಟನೆಗಳ ಪ್ರಮುಖರು ಪುನೀತ್ ಭಾವಚಿತ್ರಕ್ಕೆ ಮೇಣದ ಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ‘ದೊಡ್ಮನೆ ಕುಟುಂಬದ ಚಿಕ್ಕ ರಾಜಕುಮಾರನಂತಿದ್ದ ಪುನೀತ್ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಕನ್ನಡ ನಾಡು ಓರ್ವ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ’ ಎಂದರು.
ಚಿತ್ರನಟ, ರಂಗಭೂಮಿ ಕಲಾವಿದ ಯೇಸುಪ್ರಕಾಶ್, ‘ಪುನೀತ್ ನಿಧನ ಅರಗಿಸಿಕೊಳ್ಳಲಾಗದ ಅನ್ಯಾಯ. ಚಿತ್ರೀಕರಣದ ವೇಳೆ ಲೈಟ್ ಬಾಯ್‌ಗಳಿಂದ ಹಿಡಿದು ಸಣ್ಣಪುಟ್ಟ ಕಲಾವಿದರೊಂದಿಗೂ ಪುನೀತ್ ಆತ್ಮೀಯತೆಯಿಂದ ಬೆರೆಯುತ್ತಿದ್ದ ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅಂತಹ ಸಂಸ್ಕಾರಯುತ ಕಲಾವಿದರು ಸಿಗುವುದು ವಿರಳ’ ಎಂದು
ಹೇಳಿದರು.
ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್, ಮಧುಮಾಲತಿ, ಪ್ರಮುಖರಾದ ಡಿ. ದಿನೇಶ್, ಅರುಣ್ ಕುಗ್ವೆ, ಆರ್ಥರ್ ಗೋಮ್ಸ್, ಕಾಂತು, ಪ್ರಕಾಶ್, ಜಿ.ಕೆ. ಭೈರಪ್ಪ, ಸಿದ್ದಪ್ಪ ಕೆ. ನವೀನ್ಇದ್ದರು.
ಅಗ್ರಹಾರ ವೃತ್ತದಲ್ಲಿರುವ ಹೋಟೆಲ್ ಸದ್ಗುರು ಆವರಣದಲ್ಲಿ ಪುನೀತ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು. ಪ್ರಾಂತ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್, ಸದ್ಗುರು ಸಂತೋಷ್, ಯಶವಂತ ಫಣಿ, ರಫೀಕ್ ಕೊಪ್ಪ, ಜಮೀಲ್ ಸಾಗರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.