ADVERTISEMENT

ರಾಹುಲ್ ಗಾಂಧಿಯಿಂದ ಸೈನಿಕರಿಗೆ ಅವಮಾನ: ಎಸ್.ಎನ್.ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:08 IST
Last Updated 6 ಆಗಸ್ಟ್ 2025, 5:08 IST
<div class="paragraphs"><p>ಎಸ್.ಎನ್.ಚನ್ನಬಸಪ್ಪ</p></div>

ಎಸ್.ಎನ್.ಚನ್ನಬಸಪ್ಪ

   

ಶಿವಮೊಗ್ಗ: ‘ಭಾರತದ ಗಡಿ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಜನರ ಎದುರು ಕ್ಷಮೆ ಯಾಚಿಸಬೇಕು’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದರು.

‘ಸುಪ್ರೀಂ ಕೋರ್ಟ್, ‘ನೀವು ನೈಜ ಭಾರತೀಯರಾಗಿದ್ದರೆ, ಅಂತಹ ಮಾತು ಆಡುತ್ತಿರಲಿಲ್ಲ’ ಎಂದು ಎಚ್ಚರಿಕೆ ನೀಡಿದೆ. ಚೀನಾದ ವಿಷಯಕ್ಕೆ ಸಂಬಂಧಿಸದಂತೆ ಕಾಂಗ್ರೆಸ್ ಯಾವಾಗಲೂ ಸುಳ್ಳು ಹೇಳುತ್ತಲೇ ಬಂದಿದೆ. ಅದನ್ನೇ ರಾಹುಲ್ ಗಾಂಧಿ ಕೂಡ ಮುಂದುವರಿಸಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ADVERTISEMENT

‘ಈ ಹಿಂದೆ ದೇಶವನ್ನು ವಿಭಜನೆ ಮಾಡಿದ್ದ ಕಾಂಗ್ರೆಸ್ಸಿಗರು, ಪ್ರಸ್ತುತ ಗಡಿ ಕಾಯುವ ಸೈನಿಕರಿಗೇ ಅವಮಾನ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಚೀನಾದ ಪರ ಅವರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕಾರ್ಮಿಕ ಭವನ ಉದ್ಘಾಟನೆಗೆ ಶಿವಮೊಗ್ಗಕ್ಕೆ ಬಂದಿದ್ದ ಸಂತೋಷ್ ಲಾಡ್ ಅವರು ಅದನ್ನು ಬಿಟ್ಟು ಮೋದಿ ವಿರುದ್ಧ ಹಾಗೂ ದೇಶದ ಜಿಡಿಪಿ ಕುರಿತ ವ್ಯತಿರಿಕ್ತ ಭಾಷಣ ಮಾಡಿ ಹೋಗಿದ್ದಾರೆ. ಮೋದಿ ಅವರ ಬಗ್ಗೆ ಮಾತನಾಡುವಾಗ ಅವರು ಎಚ್ಚರಿಕೆಯಿಂದಿರಬೇಕು’ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಮೈಸೂರು ಸಾಮ್ರಾಜ್ಯವನ್ನು ದೇವರಾಜ ಅರಸು ಅವರು ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದರು. ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರವಾಗಿದ್ದರೆ ಟಿಪ್ಪು ಸಾಮ್ರಾಜ್ಯ ಎಂದು ಹೆಸರಿಡುತ್ತಿದ್ದರು’ ಎಂದು ವ್ಯಂಗ್ಯವಾಡಿದ ಅವರು, ಒಬ್ಬ ನರಹಂತಕ ಟಿಪ್ಪುವನ್ನು ವೈಭವೀಕರಿಸುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದರು.

‘ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂತೋಷ್ ಲಾಡ್ ಅವರು ರಾಜಕಾರಣ ಮಾಡಿ ಹೋಗಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ರಾಜಕಾರಣ ಭಾಷಣ ಮಾಡಿದ್ದು ಸರಿಯಲ್ಲ. ಇದು ನಮಗೆ ಅತ್ಯಂತ ಬೇಸರ ತರಿಸಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದಿಶ್, ಮಾಲತೇಶ್, ಕೆ.ಜಿ. ಕುಮಾರಸ್ವಾಮಿ, ವಿನ್ಸೆಂಟ್ ರೋಡ್ರಿಗಸ್, ಕೆ.ವಿ. ಅಣ್ಣಪ್ಪ ಇದ್ದರು.

ನೌಕರರ ಸಮಸ್ಯೆ ಸರ್ಕಾರ ಬಗೆಹರಿಸಲಿ

‘ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ನೌಕರರ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು. ನೌಕರರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದ ಸರ್ಕಾರ ಈಗ ಮುಷ್ಕರ ಮಾಡುತ್ತಿರುವವರ ವಿರುದ್ಧ ಎಸ್ಮಾ ಜಾರಿ ಮಾಡಲು ಹೊರಟಿರುವುದು ಸರಿಯಲ್ಲ’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.