ADVERTISEMENT

ಕೋಟೆ ಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಟರ್ಮಿನಲ್: ಬಿಜೆಪಿ ವಿರುದ್ಧ ‘ಕೈ’ ಕಿಡಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 10:38 IST
Last Updated 1 ಡಿಸೆಂಬರ್ 2020, 10:38 IST
   

ಶಿವಮೊಗ್ಗ: ರೈಲ್ವೆ ಕೋಚಿಂಗ್ ಟರ್ಮಿನಲ್ ಸ್ಥಾಪನೆಗೆ ತಾಳಗುಪ್ಪ ಬದಲು ಶಿವಮೊಗ್ಗ ನಗರ ಸಮೀಪದ ಕೋಟೆ ಗಂಗೂರು ಆಯ್ದುಕೊಳ್ಳಲು ರಿಯಲ್‌ ಎಸ್ಟೇಟ್‌ ಮಾಫಿಯಾ ಬೆಂಬಲವೇ ಕಾರಣ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ತುರ್ತು ಕೆಲಸಗಳ ಬಗ್ಗೆ ಗಮನಹರಿಸುತ್ತಿಲ್ಲ. ತಮಗೆ ಅನುಕೂಲವಾಗುವ ಕೆಲಸಗಳಿಗೆ ಆದ್ಯತೆ ನೀಡುತ್ತಿದ್ದಾರೆ. ರೈಲ್ವೆ ಕೋಚಿಂಗ್ ಟರ್ಮಿನಲ್ ಸ್ಥಾಪಿಸಲು ತಾಳಗುಪ್ಪ ಸೂಕ್ತ ಸ್ಥಳ ಎಂದು ರೈಲ್ವೆ ಇಲಾಖೆಯೇ ಪ್ರಕಟಣೆ ಹೊರಡಿಸಿತ್ತು. ಆದರೆ, ತಾಳಗುಪ್ಪ ಬದಲು ಕೋಟೆ ಗಂಗೂರಿಗೆ ಯೋಜನೆ ಸ್ಥಳಾಂತರಿಸಲಾಗಿದೆ. ರಿಯಲ್ ಎಸ್ಟೇಟ್ ಮಾಫಿಯಾ ಬೆಂಬಲಿಸಲೆಂದೇ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಶಾಸಕ ಹಾಲಪ್ಪ ಹರತಾಳು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಸಂಸದರನ್ನು ಎದುರು ಹಾಕಿಕೊಳ್ಳಲು ಇಚ್ಚಿಸದೇ ಮೌನವಾಗಿದ್ದಾರೆ. ಅಧಿಕಾರ ಸಿಕ್ಕ ನಂತರ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಶಿಕಾರಿಪುರ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇದ್ದರೂ, ಮೂವರು ಸದಸ್ಯರಿಗೆ ರಾಜೀನಾಮೆ ಕೊಡಿಸಿ, ಬಿಜೆಪಿ ಅಧಿಕಾರ ಪಡೆಯಲು ಹೀನಕೃತ್ಯಕ್ಕೆ ಇಳಿದಿದ್ದಾರೆ. ಜಿಲ್ಲಾ ಪಂಚಾಯಿತಿಯಲ್ಲೂ ಜೆಡಿಎಸ್ ಅಧ್ಯಕ್ಷರನ್ನು ಬೆಂಬಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಲು ಮುಖ್ಯಮಂತ್ರಿ ನಿರ್ಲಕ್ಷ್ಯ ವಹಿಸುತ್ತಿದ್ಧಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿಲ್ಲ. ಸಂಸದರಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ಹಾಗೂ ಈಗಿನ ಸಂಸದ ಬಿ.ವೈ.ರಾಘವೇಂದ್ರ ಅಧಿವೇಶನದಲ್ಲಿ ಒಂದು ಮಾತೂ ಆಡಿಲ್ಲ. ಅಡಿಕೆ ಬೆಳೆಗಾರರ ಹಿತಕಾಪಾಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಜಾಣ ಮರೆವು ತೋರುತ್ತಿವೆ ಎಂದು ಟೀಕಿಸಿದರು.

ವಾಜಪೇಯಿ ವಸತಿ ಯೋಜನೆಯ ಸರಿಯಾದ ನಿರ್ವಹಣೆ ಆಗಿಲ್ಲ. ಉದ್ಯೋಗ ಖಾತ್ರಿ ಬಾಕಿ ಇದೆ. ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿದಿಲ್ಲ. ತಾಳಗುಪ್ಪ-ಹೊನ್ನಾವರ ಕೊಂಕಣ ರೈಲ್ವೆಗೆ ಸಂಪರ್ಕ ಮಾಡುವ ತಾಕತ್ತು ಅವರಿಗಿಲ್ಲ. ಅವರಿಗೆ ಬೇಕಾದ ಕಡೆ ಹಳಿಗಳನ್ನು ನಿರ್ಮಿಸುತ್ತಿದ್ದಾರೆ. ಮಂಕಿಪಾರ್ಕ್ ನಿರ್ಮಾಣಕ್ಕೆ ಬಿಜೆಪಿ ಶಾಸಕರಲ್ಲೇ ಒಮ್ಮತ ಇಲ್ಲ. ಎಂಪಿಎಂ ಅರಣ್ಯ ಭೂಮಿ ಲೂಟಿ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.