ಸಾಗರ: ತಾಲ್ಲೂಕಿನಲ್ಲಿ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಕಳೆದ ಏಳು ದಿನಗಳಿಂದ ನಿರಂತರವಾಗಿ ಜಡಿಮಳೆಯಾದ ಕಾರಣ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.
ತಾಲ್ಲೂಕಿನ ತಾಳಗುಪ್ಪ ಹೋಬಳಿಯಲ್ಲಿ ವರದಾ ನದಿ ಪ್ರವಾಹದಿಂದ ಸುಮಾರು 2 ಸಾವಿರ ಎಕರೆ ಭತ್ತದ ಗದ್ದೆಯಲ್ಲಿ ನಿಂತಿರುವ ನೀರಿನ ಪ್ರಮಾಣ ಇನ್ನೂ ಇಳಿಕೆಯಾಗಿಲ್ಲ. ತಾಳಗುಪ್ಪ, ಕಾನ್ಲೆ, ಸೈದೂರು, ಮಂಡಗಳಲೆ, ತಡಗಳಲೆ, ಹಿರೇನೆಲ್ಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಸೈದೂರು, ಕಾನ್ಲೆ ನಡುವಿನ ಕನ್ನಹೊಳೆ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಈ ಸೇತುವೆ ಮೇಲಿನ ಸಂಚಾರ ನಿಷೇಧ ಮುಂದುವರೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಶನಿವಾರ ಈ ಭಾಗಕ್ಕೆ ಭೇಟಿ ನೀಡಿದ್ದರು.
ಕನ್ನಹೊಳೆ ಸೇತುವೆ ಮೇಲೆ ಸಂಚಾರ ನಿಷೇಧಿಸಿರುವುದರಿಂದ ಸೈದೂರು, ತಡಗಳಲೆ ಭಾಗದ ಗ್ರಾಮಸ್ಥರು ತಾಳಗುಪ್ಪದ ಮೂಲಕ ಸಾಗರಕ್ಕೆ ಸಂಚರಿಸುವಂತಾಗಿದೆ. ಬೀಸನಗದ್ದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಮಳೆಯ ಪ್ರಮಾಣ ಹೆಚ್ಚಾದರೆ ಈ ಗ್ರಾಮ ನಾಗರಿಕ ಜಗತ್ತಿನ ಸಂಪರ್ಕ ಕಡಿದುಕೊಳ್ಳುವ ಅಪಾಯಕ್ಕೆ ಸಿಲುಕಿದೆ.
ನಗರದ ಬಸವನಹೊಳೆ ಡ್ಯಾಂನಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಗಾಂಧಿನಗರ ಬಡಾವಣೆಯ ಹಬೀಬ್ ಸಾಬ್, ಇನಾಯತ್ ಹಾಗೂ ನಿಸ್ಸಾರ್ ಎಂಬುವವರ ಮನೆಯ ಗೋಡೆ ಕುಸಿದು ಹಾನಿ ಉಂಟಾಗಿದೆ. ಒಂದು ದ್ವಿಚಕ್ರ ವಾಹನ, ಗೃಹಪಯೋಗಿ ವಸ್ತುಗಳು ಜಖಂಗೊಂಡಿವೆ. ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.