ADVERTISEMENT

ಮಳೆಯ ಆರ್ಭಟ, ತಂ‍ಪಾದ ‘ಸಿಹಿ’ಮೊಗ್ಗೆ

ಮಲೆನಾಡ ಹೆಬ್ಬಾಗಿಲಿಗೆ ಜೀವ ತುಂಬಿದ ಅಶ್ವಿನಿ ಮಳೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 6:53 IST
Last Updated 14 ಏಪ್ರಿಲ್ 2024, 6:53 IST
ಆನಂದಪುರದಲ್ಲಿ ಯುವಕನೊಬ್ಬ ಭಾರಿ ಮಳೆಯ ನಡುವೆ ಛತ್ರಿಯ ಆಸರೆಯೊಂದಿಗೆ ನಡೆದುಕೊಂಡು ಹೋಗುತ್ತಿರುವುದು
ಆನಂದಪುರದಲ್ಲಿ ಯುವಕನೊಬ್ಬ ಭಾರಿ ಮಳೆಯ ನಡುವೆ ಛತ್ರಿಯ ಆಸರೆಯೊಂದಿಗೆ ನಡೆದುಕೊಂಡು ಹೋಗುತ್ತಿರುವುದು   

ಶಿವಮೊಗ್ಗ: ‘ಬರ’ದ ಛಾಯೆ, ಕಡು ಬಿಸಿಲ ಝಳಕ್ಕೆ ಕಳೆದ ಒಂದೂವರೆ ತಿಂಗಳಿಂದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಗರ ಅಕ್ಷರಶಃ ಕಾದ ಕಾವಲಿಯಂತಾಗಿತ್ತು. ಆದರೆ ಶನಿವಾರ ಸಂಜೆ ಆರ್ಭಟಿಸಿದ ಅಶ್ವಿನಿ ಮಳೆ, ಮುಂದಿನ ಹಸಿರೋತ್ಸವಕ್ಕೆ ಮುನ್ನುಡಿ ಬರೆಯಿತು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ಶಿವಮೊಗ್ಗ ನಗರಕ್ಕೆ ಮತ್ತೆ ‘ಮಳೆ’ನಾಡಿನ ಕಳೆ ತಂದಿತು. ಸೆಕೆ ಕುಚ್ಚುವಿಕೆಯಿಂದ ಬೇಸತ್ತು ಬಳಲಿದ್ದ ಜನರಿಗೆ ಮಳೆಯೊಂದಿಗೆ ಬೀಸಿದ ಕುಳಿರ್ಗಾಳಿ ಮೈ–ಮನಗಳಲ್ಲಿ ಚೈತನ್ಯ ತಂದಿತು. ರಾತ್ರಿ ಥಂಡಿ ವಾತಾವರಣದ ಜೊತೆಗೆ ಹೊಸ ವರ್ಷದಲ್ಲಿ ಮೊದಲ ಬಾರಿಗೆ ಶಿವಮೊಗ್ಗದ ಜನರು ಕಪ್ಪೆಗಳ ವಟಗುಟ್ಟುವಿಕೆ, ಆಟಾಟೋಪ ಕಂಡು ಮುದಗೊಂಡರು. ಸಂಜೆಗತ್ತಲಿನೊಂದಿಗೆ ಮಳೆ ಹುಳಗಳು ಪೈಪೋಟಿಗೆ ಇಳಿದಿದ್ದವು.

ಯುಗಾದಿಗೆ ಮುನ್ನ ಮುನಿಸಿಕೊಂಡಿದ್ದ ಮಳೆರಾಯ, ‘ಬರ’ದ ತೀವ್ರತೆಯ ಆತಂಕ ಮೂಡಿಸಿದ್ದ. ಅದರೆ ವಾರಾಂತ್ಯದಲ್ಲಿ ಸದ್ದು ಮಾಡಿ ಮುನಿಸು ಮರೆತ ಗೆಳತಿಯಂತೆ ಇಳೆಯ ತಬ್ಬಿನಿಂತನು.

ADVERTISEMENT

ಅಡಿಕೆ ತೋಟಗಳಿಗೆ ಜೀವ: ನಗರದ ಸುತ್ತಮುತ್ತ ಅಡಿಕೆ ತೋಟಗಳಿಗೆ ನೀರು ಇಲ್ಲದೇ ಬೆಳೆಗಾರರು ಆಕಾಶದತ್ತ ಮುಖ ಮಾಡಿ ನಿಂತಿದ್ದರು. ಮೋಡ ಸಾಂದ್ರಗೊಂಡರೂ ನೆಲಕ್ಕೆ ಹನಿಯಲು ಮಳೆರಾಯ ಹೊಯ್ದಾಡುತ್ತಿದ್ದರಿಂದ ಕೃಷಿಕರ ಮೊಗದಲ್ಲಿ ಬಹುತೇಕ ನಿರಾಶೆಯ ಕಾರ್ಮೋಡವೇ ಆವರಿಸಿತ್ತು. ಅದು ಈಗ ಕರಗಿತು. ಮಳೆ ಸದ್ಯಕ್ಕೆ ಅವರಲ್ಲೂ ಮಂದಹಾಸ ಮೂಡಿಸಿತು.

ಕುಂಸಿ ಸಮೀಪದ ಮಲೆಶಂಕರದಲ್ಲಿ ಶನಿವಾರ ಸಿಡಿಲು ಬಡಿದು ಶೇಖರಪ್ಪ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.

ಮಳೆಯಿಂದಾಗಿ ಶಿವಮೊಗ್ಗ ನಗರದಲ್ಲಿ ರಸ್ತೆ, ಬಯಲು, ಗಿಡ–ಮರಗಳಿಗೂ ಮಜ್ಜನದ ಸಂಭ್ರಮ. ಡಾಂಬರೀಕರಣಗೊಂಡ ರಸ್ತೆಗಳಲ್ಲಿ ನೀರ ಹಾದಿ ಒಡಮೂಡಿ ಅವು ಹೊಳಪು ಪಡೆದಿದ್ದವು. ರಸ್ತೆಯ ಗುಂಡಿಗಳು, ಚರಂಡಿಗಳು ನೀರು ತುಂಬಿ ಹರಿದವು. ವಸಂತನಾಗಮನಕ್ಕೆ ಸಾಕ್ಷಿಯಾಗಿ ಮರ–ಗಿಡಗಳಲ್ಲಿ ಹೂ, ಚಿಗುರು, ಎಲೆಗಳು ಒಡಮೂಡಿದ್ದು, ಹಳೆಯ ಅವಯವಗಳು ಮಳೆ–ಗಾಳಿಯ ಆರ್ಭಟಕ್ಕೆ ಸಿಲುಕಿ ಕಳಚಿಬಿದ್ದು ರಸ್ತೆ, ಅಂಗಳದಲ್ಲಿ ಹರಡಿಕೊಂಡವು.

ಸ್ವೆಟರ್, ಜರ್ಕಿನ್, ಟೋಪಿ, ಛತ್ರಿ ಎಲ್ಲವೂ ಮತ್ತೆ ಜೀವ ಪಡೆದವು. ಸಂಜೆ ಕಾಫಿಯ ಸ್ವಾದ ಮಳೆಯ ಮತ್ತನ್ನು ಆಸ್ವಾದಿಸಲು ನೆರವಾಯಿತು. ಮಳೆಯ ಸ್ಪರ್ಶದಿಂದ ಇಳೆ ಹದಗೊಂಡು ಮಣ್ಣಿನ ಘಮಲು ಎಲ್ಲೆಡೆ ಹರಡಿತು.

ಗುಡುಗು–ಸಿಡಿಲಿನ ಸದ್ದಿಗೆ ಮೆಸ್ಕಾಂ ಬೆದರಿದ ಪರಿಣಾಮ ನಗರದ ಬಹುತೇಕ ಭಾಗದಲ್ಲಿ ವಿದ್ಯುತ್ ಕಡಿತಗೊಂಡು ಇಳಿಸಂಜೆಗೆ ಮೌನದ ಬಿಸುಪನ್ನು ಹೊದ್ದರೆ ರಾತ್ರಿ ರಸ್ತೆ, ಓಣಿಗಳು ನೀರವಗೊಂಡು ಇಡೀ ಊರು ಹೊದ್ದು ಮಲಗಿದಂತೆ ತೋರಿತು.

ರಿಪ್ಪನ್ ಪೇಟೆಯಲ್ಲಿ ಶನಿವಾರ  ಗುಡುಗು ಸಿಡಿಲು ಸಹಿತ  ಆಲಿಕಲ್ಲು ಮಳೆ ಸುರಿಯಿತು

ಉರುಳಿದ ಮರ, ವಿದ್ಯುತ್‌ ಕಂಬ, ಸಿಡಿಲಿಗೆ ಎಮ್ಮೆ ಬಲಿ

ಶಿವಮೊಗ್ಗದಲ್ಲಿ ರಭಸದ ಗಾಳಿ ಜೊತೆ ಸುರಿದ ಧಾರಾಕಾರ ಮಳೆಯಿಂದಾಗಿ ವಿನೋಬ ನಗರದ ಕೆಂಚಪ್ಪ ಲೇಔಟ್‍ನ ಕೆಎಚ್‍ಬಿ ಕಾಲೋನಿಯಲ್ಲಿ ಬೃಹದಾಕಾರದ ಬೇವಿನ ಮರ ಉರುಳಿ ಬಿದ್ದಿತು. ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲದೆ ಎದುರು ಮನೆಯ ಕಾಂಪೌಂಡ್ ಬಾಲ್ಕನಿಯ ತಡೆಗೋಡೆ ಸಂಪೂರ್ಣ ಹಾನಿಗೀಡಾಗಿದೆ. ಮರಕ್ಕೆ ಹೊಂದಿಕೊಂಡಿದ್ದ ಉದ್ಯಾನವನದ ಕಬ್ಬಿಣದ ಗ್ರಿಲ್‍ಗೂ ಹಾನಿಯಾಗಿದೆ. ಅದೃಷ್ಟವಾತ್ ಯಾರಿಗೂ ಅಪಾಯವಾಗಿಲ್ಲ. ಇದೇ ಸ್ಥಳದಿಂದ ಸ್ಪಲ್ಪ ದೂರದಲ್ಲಿ ಮತ್ತೊಂದು ಬರ ಬಿದ್ದಿದೆ. ವಿನೋಬನಗರದ 100 ಅಡಿ ರಸ್ತೆಯಲ್ಲಿ ಮರದ ಟೊಂಗೆ ಮುರಿದು ರಸ್ತೆಗೆ ಬಿದ್ದಿತ್ತು. ಮಳೆಯಿಂದಾಗಿ ವಾಹನ ಸಂಚಾರ ದಟ್ಟಣೆ ಇಲ್ಲದ ಕಾರಣ ಯಾವುದೇ ಅವಘಡ ಆಗಿಲ್ಲ. ಶಿವಮೊಗ್ಗ ಸಮೀಪದ ಪುರದಾಳು ಬಳಿ ಸಿಡಿಲು ಬಡಿದು ಎರಡು ಎಮ್ಮೆ ಸಾವನ್ನಪ್ಪಿವೆ.

ಶಿವಮೊಗ್ಗದ ವಿನೋಬ ನಗರದ 100 ಅಡಿ ರಸ್ತೆಯಲ್ಲಿ ಮಳೆಯ ಆರ್ಭಟಕ್ಕೆ ಮರದ ಕೊಂಬೆ ಮುರಿದುಬಿದ್ದಿತು.
ಕುಂಸಿ: ಮನೆ ಮೇಲೆ ಬಿದ್ದ ಮರ
ಕುಂಸಿ ವರದಿ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ಗುಡುಗು ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ. ಸಮೀಪದ ಶೆಟ್ಟಿಕೆರೆ ಕೊರಗಿ ಚೋಡನಾಳ ತುಪ್ಪೂರು ಚೋರಡಿ ಆಯನೂರು ಹಾರನಹಳ್ಳಿ ತಮ್ಮಡಿಹಳ್ಳಿ ಕಲ್ಲುಕೊಪ್ಪ ಮತ್ತು ಮಲೆಶಂಕರದಲ್ಲಿ ಮಳೆಯಾಗಿದೆ. ಮಳೆ‌ ಮತ್ತು ಸಿಡಿಲು ಬಡಿದು ಮಲೆಶಂಕರದ ಶೇಖರಪ್ಪ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.ಸದ್ಯ ಮನೆಯಲ್ಲಿರುವ ಯಾವುದೇ ಸದಸ್ಯರಿಗೆ ಅಪಾಯವಾಗಿಲ್ಲ.

ರಿಪ್ಪನ್‌ಪೇಟೆ: ಆಲಿಕಲ್ಲು ಮಳೆ ಅಬ್ಬರ

ರಿಪ್ಪನ್‌ಪೇಟೆ: ಶನಿವಾರ ಸಂಜೆ ರಿಪ್ಪನ್‌ಪೇಟೆ ಹೆದ್ದಾರಿಪುರ ಅಮೃತ ಹುಂಚ ಬೆಳ್ಳೂರು ಬಾಳೂರು ಅರಸಾಳು ಹರತಾಳು ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗಾಳಿ ಮಿಂಚು ಗುಡುಗು ಸಹಿತ ಒಂದು ಗಂಟೆಗೂ ಹೆಚ್ಚು ಅವಧಿಯ ಅಬ್ಬರದ ಆಲಿಕಲ್ಲು ಮಳೆ ಸುರಿಯಿತು.  ಕಳೆದ ಎರಡು ತಿಂಗಳುಗಳಿಂದ ಬಿಸಿಲ ಬೇಗೆಗೆ ಬೆಂದು ಬಸವಳಿದ  ನಾಗರಿಕರು ರೈತಾಪಿ ವರ್ಗದವರಲ್ಲಿ   ಈ ಮಾಹೆಯ ಮೊದಲ ಉತ್ತಮ ಮಳೆ ಹರ್ಷವನ್ನುಂಟು ಮಾಡಿತು. ಜನ ಜಾನುವಾರು ಹಾಗೂ ಪರಿಸರಕ್ಕೆ ಸ್ವಲ್ಪ ಮಟ್ಟಿಗೆ ತಂಪರೆದಂತಾಗಿದೆ.  ಈ ಹಿಂದೆ ಒಂದೆರಡು ಬಾರಿ  ಚದುರಿದಂತೆ ಮಳೆಯಾಗಿತ್ತು.  ಗಾಳಿಯ ಅಬ್ಬರಕ್ಕೆ ಗ್ರಾಮೀಣ ಭಾಗದ  ಕೆಲವೆಡೆ ಮರಳು ಮರಗಳು  ಉರುಳಿ  ಬಿದ್ದ ಪರಿಣಾಮ ವಿದ್ಯುತ್ ಹಾಗೂ  ದೂರವಾಣಿ ಸಂಪರ್ಕಗಳು ಕಡಿತಗೊಂಡು ನಾಗರಿಕರು ಕಗ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.