ಶಿವಮೊಗ್ಗ: ಜಿಲ್ಲೆಯಲ್ಲಿ ಆರಿದ್ರಾ ಮಳೆ ಗುರುವಾರ ಬಿರುಸುಗೊಂಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 25.48 ಸೆಂ.ಮೀ ಮಳೆಯಾಗಿದೆ. ಹೀಗಾಗಿ ತುಂಗಾ, ಭದ್ರಾ, ಲಿಂಗನಮಕ್ಕಿ, ಮಾಣಿ, ಚಕ್ರಾ, ಸಾವೆಹಕ್ಲು ಸೇರಿದಂತೆ ಪ್ರಮುಖ ಜಲಾಶಯಗಳಿಗೆ ಒಳಹರಿವು ಪ್ರಮಾಣ ಹೆಚ್ಚಳಗೊಂಡಿದೆ.
ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಜಲಾಶಯದ 22 ಕ್ರಸ್ಟ್‌ಗೇಟ್‌ಗಳಲ್ಲಿ 10 ಗೇಟ್‌ಗಳನ್ನು ಗುರುವಾರ ತೆರೆಯಲಾಗಿದೆ. ಜಲಾಶಯಕ್ಕೆ 12082 ಕ್ಯುಸೆಕ್ ಒಳಹರಿವು ಇದ್ದು, ನದಿಗೆ 6,479 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ಲಿಂಗನಮಕ್ಕಿಗೆ ಗುರುವಾರ 15,466 ಕ್ಯುಸೆಕ್ ದಾಖಲಾಗಿದೆ. ಸದ್ಯ 1,698 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಸಾಗರ ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆ ದಾಖಲಾಗಿದ್ದು, 8.08 ಸೆಂ.ಮೀ ಮಳೆ ಬಿದ್ದಿದೆ. ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 20.84 ಸೆಂ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷದ ಇದೇ ದಿನ 35.5 ಸೆಂ.ಮೀ ಮಳೆ ಬಿದ್ದಿತ್ತು. ಹೊಸನಗರ ತಾಲ್ಲೂಕಿನ ಮಾಣಿಯಲ್ಲಿ 14.2 ಸೆಂ.ಮೀ ಹಾಗೂ ಹುಲಿಕಲ್ ಘಾಟಿಯಲ್ಲಿ 12.7 ಸೆಂ.ಮೀ ಮಳೆ ಸುರಿದಿದೆ.
ಶಿವಮೊಗ್ಗ 1.18 ಸೆಂ.ಮೀ, ಭದ್ರಾವತಿ 1.10 ಸೆಂ.ಮೀ, ತೀರ್ಥಹಳ್ಳಿ 5.40 ಸೆಂ.ಮೀ, ಸಾಗರ 8.80 ಸೆಂ.ಮೀ, ಶಿಕಾರಿಪುರ 1.89 ಸೆಂ.ಮೀ, ಸೊರಬ 2.82 ಸೆಂ.ಮೀ ಹಾಗೂ ಹೊಸನಗರ ತಾಲ್ಲೂಕಿನಲ್ಲಿ 5.46 ಸೆಂ.ಮೀ ಮಳೆ ದಾಖಲಾಗಿದೆ.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಇತರೆಡೆಯಲ್ಲೂ ಉತ್ತಮ ಮಳೆಯಾಗಿದೆ. ತುಂಗಾ, ಭದ್ರಾ, ಶರಾವತಿ, ವರದಾ, ಕುಮದ್ವತಿ ನದಿಗಳ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಬಹುತೇಕು ನದಿಗಳು ಮೈದುಂಬಿವೆ. ಜೊತೆಗೆ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.