ADVERTISEMENT

ರಂಗಾಯಣ: 6ರಿಂದ ಮಹಿಳಾ ನಾಟಕೋತ್ಸವ ‘ಜೀವನ್ಮುಖಿ’

ಮಾರ್ಚ್‌ 9ರವರೆಗೆ ನಾಲ್ಕು ನಾಟಕಗಳ ಪ್ರದರ್ಶನ, ರಂಗ ಗೀತೆಗಳ ಗಾಯನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:00 IST
Last Updated 3 ಮಾರ್ಚ್ 2021, 13:00 IST
ಶಿವಮೊಗ್ಗ ರಂಗಾಯಣ ಆಯೋಜಿಸಿರುವ ಜೀವನ್ಮುಖಿ ನಾಟಕೋತ್ಸವದ ಭಿತ್ತಿಪತ್ರಗಳನ್ನು ಬುಧವಾರ ಸಂದೇಶ ಜವಳಿ, ಆರ್‌.ಎಸ್.ಹಾಲಸ್ವಾಮಿ, ಶಫಿ ಸಾದುದ್ದೀನ್ ಅನಾವರಣಗೊಳಿಸಿದರು.
ಶಿವಮೊಗ್ಗ ರಂಗಾಯಣ ಆಯೋಜಿಸಿರುವ ಜೀವನ್ಮುಖಿ ನಾಟಕೋತ್ಸವದ ಭಿತ್ತಿಪತ್ರಗಳನ್ನು ಬುಧವಾರ ಸಂದೇಶ ಜವಳಿ, ಆರ್‌.ಎಸ್.ಹಾಲಸ್ವಾಮಿ, ಶಫಿ ಸಾದುದ್ದೀನ್ ಅನಾವರಣಗೊಳಿಸಿದರು.   

ಶಿವಮೊಗ್ಗ: ಮಹಿಳಾ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ರಂಗಾಯಣ ಮಾರ್ಚ್ 6ರಿಂದ 9ರವರೆಗೆ ನಾಲ್ಕು ದಿನಗಳು ಮಹಿಳಾ ನಾಟಕೋತ್ಸವ ‘ಜೀವನ್ಮುಖಿ’ ಆಯೋಜಿಸಿದೆ.

ಮಹಿಳೆಯರನ್ನು ರಂಗಭೂಮಿಯತ್ತ ಸೆಳೆದು ಕನ್ನಡ ರಂಗಭೂಮಿ ಗಟ್ಟಿಗೊಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಲ್ಕು ದಿನಗಳ ಉತ್ಸವದಲ್ಲಿ ಮಹಿಳಾ ವಿಚಾರಗಳನ್ನು ಪ್ರಧಾನವಾಗಿ ಹೊಂದಿರುವ ಅತ್ಯುತ್ತಮ ನಾಟಕಗಳ ಪ್ರದರ್ಶನ, ಏಕವ್ಯಕ್ತಿ ರಂಗ ಪ್ರಯೋಗ, ವಿಚಾರಗೋಷ್ಠಿ ಮತ್ತು ರಂಗ ಗೀತೆಗಳ ಕಾರ್ಯಕ್ರಮಗಳು ನಡೆಯಲಿವೆ ಎಂದು ರಂಗಾಯಣ ನಿರ್ದೇಶಕ ಸಂದೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

6ರಂದು ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕಿ ರಜನಿ ಪೈ ಕಾರ್ಯಕ್ರಮ ಉದ್ಘಾಟಿಸುವರು. ಮೇಯರ್ ಸುವರ್ಣಾ ಶಂಕರ್, ರಂಗಸಮಾಜದ ಸಾರ್ವತ್ರಿಕ ಮಂಡಳಿ ಸದಸ್ಯ ಆರ್.ಎಸ್.ಹಾಲಸ್ವಾಮಿ ಭಾಗವಹಿಸುವರು. ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸುವರು. ಉದ್ಘಾಟನಾ ಸಮಾರಂಭದ ನಂತರ ರಂಗ ಕಲಾವಿದೆ ಸವಿತಕ್ಕ ಅಭಿನಯದ, ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಏಕವ್ಯಕ್ತಿ ನಾಟಕ ‘ಉಧೋ ಉಧೋ ಎಲ್ಲವ್ವ’ ಪ್ರದರ್ಶನಗೊಳ್ಳಲಿದೆ. 7ರಂದು ಸಂಜೆ 6.30ಕ್ಕೆ ಬೆಂಗಳೂರಿನ ರಂಗಪಯಣ ಪ್ರಸ್ತುತಿಯ, ರಾಜ್‌ಗುರು ಹೊಸಕೋಟೆ ನಿರ್ದೇಶನದ, ಪ್ರವೀಣ್ ಸೂಡ ರಚನೆಯ ‘ಗುಲಾಬಿ ಗ್ಯಾಂಗ್-ಭಾಗ 01’ ನಾಟಕ ಪ್ರದರ್ಶನವಿರುತ್ತದೆ ಎಂದರು.

ADVERTISEMENT

8ರಂದು ಬೆಳಿಗ್ಗೆ 10.15ರಿಂದ ಕನ್ನಡರಂಗ ಭೂಮಿಯಲ್ಲಿ ಮಹಿಳೆಯರು ಅಂದು ಮತ್ತು ಇಂದು’ ವಿಚಾರ ಕುರಿತು ಸಂವಾದ ಆಯೋಜಿಸಲಾಗಿದೆ. ಹೆಗ್ಗೋಡಿನ ರಂಗಕರ್ಮಿ ವಿದ್ಯಾ ಹೆಗಡೆ ಭಾಗವಹಿಸುವರು. ಖ್ಯಾತ ನೃತ್ಯಕಲಾವಿದೆ ಡಾ.ಕೆ.ಎಸ್.ಪವಿತ್ರಾಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ರಂಗಕರ್ಮಿ ನಯನಾ ಸೂಡ ಭಾಗವಹಿಸುವರು. ವಿಚಾರಗೋಷ್ಠಿಯ ನಂತರ ಯುವ ರಂಗಕರ್ಮಿ ಮೇದಿನಿ ಕೆಳಮನೆ ನಿರ್ದೇಶನದ, ವೈದೇಹಿ ಕಥೆ ಆಧಾರಿತ ‘ದಾಳಿ’ ಕಿರು ಚಲನಚಿತ್ರ ಪ್ರದರ್ಶನವಾಗಲಿದೆ. ಮಧ್ಯಾಹ್ನ 12.30ರಿಂದ 1.30ರವರೆಗೆ ಶಿವಮೊಗ್ಗದ ಗಾಯಕಿ ನಾಗರತ್ನಾ ನೇತೃತ್ವದ ಮಧುರ ಕಲಾವೃಂದ ತಂಡ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದೆ. ಸಂಜೆ 6.30ಕ್ಕೆ ಗುಲಾಬಿ ಗ್ಯಾಂಗ್ ಭಾಗ-02 ನಾಟಕ ಪ್ರದರ್ಶನವಿರುತ್ತದೆ ಎಂದು ವಿವರ ನೀಡಿದರು.

9ರಂದು ಸಂಜೆ 6.30ಕ್ಕೆ ಸಮಾರೋಪವಿರುತ್ತದೆ. ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ ಭಾಗವಹಿಸುವರು. ರಂಸಮಾಜದ ಸದಸ್ಯೆ ಡಾ.ಹೆಲನ್ ಉಪಸ್ಥಿತರಿರುವರು. ನಂತರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ನೃತ್ಯಗುರು ಸಹನಾ ಚೇತನ್ ನಿರ್ದೇಶನದಲ್ಲಿ ಡಾ.ಎ.ಜಿ.ಗೋಪಾಲಕೃಷ್ಣ ಕೊಳ್ತಾಯ ರಚನೆಯ ಶರಣೆ ಅಕ್ಕಮಹಾದೇವಿಯ ಜೀವನಗಾಥೆಯ ‘ದಾಕ್ಷಿಣಾತ್ಯ ತಪಸ್ವಿನಿ’ ನೃತ್ಯ ನಾಟಕ ಪ್ರದರ್ಶನ ನಡೆಯಲಿದೆ.ಪ್ರತಿ ನಾಟಕಕ್ಕೂ ₹ 30 ಪ್ರವೇಶ ಶುಲ್ಕವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಸಮಾಜದ ಸದಸ್ಯ ಆರ್‌.ಎಸ್.ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.