ADVERTISEMENT

ರಾಣಿ ಚೆನ್ನಮ್ಮಾಜಿ ಶೌರ್ಯ, ಸಾಹಸ ಯುವಜನರಿಗೆ ಮಾದರಿ

ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್‌. ಹಾಲಪ್ಪ ಹರತಾಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 4:11 IST
Last Updated 28 ಫೆಬ್ರುವರಿ 2022, 4:11 IST
ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಭಾನುವಾರ ನಡೆದ ಕೆಳದಿರಾಣಿ ಚೆನ್ನಮ್ಮಾಜಿ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಎಚ್. ಹಾಲಪ್ಪ ಹರತಾಳು ಅವರು ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಭಾನುವಾರ ನಡೆದ ಕೆಳದಿರಾಣಿ ಚೆನ್ನಮ್ಮಾಜಿ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಎಚ್. ಹಾಲಪ್ಪ ಹರತಾಳು ಅವರು ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.   

ಸಾಗರ: ಕೆಳದಿ ರಾಣಿ ಚೆನ್ನಮ್ಮಾಜಿಯ ಶೌರ್ಯ, ಸಾಹಸ, ಆಡಳಿತದ ಗುಣ ಮತ್ತು ಪರೋಪಕಾರ ಮನೋಭಾವ ಯುವಜನರಿಗೆ ಮಾದರಿ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.

ತಾಲ್ಲೂಕಿನ ಕೆಳದಿಯಲ್ಲಿ ತಾಲ್ಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ ಕೆಳದಿ ರಾಣಿ ಚೆನ್ನಮ್ಮಾಜಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆಳದಿ ರಾಣಿ ಚೆನ್ನಮ್ಮಾಜಿ ಒಂದು ಧರ್ಮ, ಜಾತಿಗೆ ಸೀಮಿತರಾದವರಲ್ಲ. ಅವರ ಆಡಳಿತ ವೈಖರಿ ಸರ್ವಧರ್ಮ ವ್ಯಾಪ್ತಿಯನ್ನು ಒಳಗೊಂಡಿತ್ತು ಎಂದು ಹೇಳಿದರು.

ADVERTISEMENT

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚೆನ್ನಮ್ಮಾಜಿ ಜಯಂತಿ ಆಚರಿಸಲು ಮನವಿ ಮಾಡಿದ್ದೆನು. ಇದಕ್ಕಾಗಿ ₹ 50 ಲಕ್ಷ ಅನುದಾನ ಕೊಡಲು ಒಪ್ಪಿದ್ದರು. ಕೊರೊನಾ ಕಾರಣ ಜಯಂತಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ನಮ್ಮ ಮನವಿಗೆ ಸ್ಪಂದಿಸಿ ಚೆನ್ನಮ್ಮಾಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿ ₹ 25 ಲಕ್ಷ ಅನುದಾನ ನೀಡಿದ್ದಾರೆ. ಫೆ. 27ಕ್ಕೆ ಕೆಳದಿ ರಾಣಿ ಚೆನ್ನಮ್ಮಾಜಿ ಪಟ್ಟಾಭಿಷೇಕವಾಗಿ 350 ವರ್ಷಗಳಾಗಿರುವುದರಿಂದ ಸರಳವಾಗಿ ಜಯಂತಿ ಆಚರಿಸಲಾಗಿದೆ. ಏಪ್ರಿಲ್ ನಂತರ ಅದ್ದೂರಿಯಾಗಿ ಆಚರಿಸಲಾಗುವುದು’ ಎಂದರು.

ಮುರುಘಾ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ನಾಡಿಗೆ ಕೆಳದಿ ಅರಸರು ನೀಡಿದ ಕೊಡುಗೆ ಅಪಾರ. ರಾಣಿ ಚೆನ್ನಮ್ಮಾಜಿ ಉತ್ಸವ ಆಚರಿಸುವ ಮೂಲಕ ಕೆಳದಿ ಅರಸರ ಸಂಸ್ಕೃತಿಯನ್ನು ಜನಮಾನಸಕ್ಕೆ ತಿಳಿಸುವ ಪ್ರಯತ್ನ ಸ್ವಾಗತಾರ್ಹ’ ಎಂದು ಹೇಳಿದರು.

ಕೆಳದಿ ರಾಜಗುರು ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭವಿಷ್ಯದ ದೃಷ್ಟಿಯಿಂದ ಕೆಳದಿ ಇತಿಹಾಸ ಅತ್ಯಂತ ಮಹತ್ವದ್ದಾಗಿದೆ. ಇತಿಹಾಸ ಪುಟಗಳಲ್ಲಿ ಕೆಳದಿ ಅರಸರ ಆಡಳಿತ ಮರೆಯಾಗಲು ಬಿಡಬಾರದು. ಇಂತಹ ಉತ್ಸವಗಳ ಮೂಲಕ ಕೆಳದಿ ರಾಣಿ ಚೆನ್ನಮ್ಮಾಜಿ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಸಕರ ಪ್ರಯತ್ನ ಅಭಿನಂದಾರ್ಹ’ ಎಂದು ತಿಳಿಸಿದರು.

ಕೆಳದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್, ಹಿರೇಮಗಳೂರು ಕಣ್ಣನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.