ADVERTISEMENT

ಇನ್ನಷ್ಟು ಪಂದ್ಯಗಳು ನಡೆಯಲಿ; ಬಾಲ ಪ್ರತಿಭೆಗಳಿಗೆ ಪ್ರೇರಣೆ ಸಿಗಲಿ

ಮಲೆನಾಡಿನ ಕ್ರಿಕೆಟ್‌ ಪ್ರಿಯರ ಕೋರಿಕೆ

ಜಿ.ಶಿವಕುಮಾರ
Published 29 ಅಕ್ಟೋಬರ್ 2025, 4:20 IST
Last Updated 29 ಅಕ್ಟೋಬರ್ 2025, 4:20 IST
ಕರ್ನಾಟಕ ಹಾಗೂ ಗೋವಾ ನಡುವಣ ಪಂದ್ಯದಲ್ಲಿ ಬಾಲ್‌ ಬಾಯ್‌ಗಳಾಗಿ ಕಾರ್ಯನಿರ್ವಹಿಸಿದ್ದ ಹುಡುಗರು  ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್. 
ಕರ್ನಾಟಕ ಹಾಗೂ ಗೋವಾ ನಡುವಣ ಪಂದ್ಯದಲ್ಲಿ ಬಾಲ್‌ ಬಾಯ್‌ಗಳಾಗಿ ಕಾರ್ಯನಿರ್ವಹಿಸಿದ್ದ ಹುಡುಗರು  ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.    

ಶಿವಮೊಗ್ಗ: ಇಲ್ಲಿನ ನವುಲೆ ಕೆರೆ ದಡದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ 5 ವರ್ಷಗಳ ನಂತರ ಆಯೋಜನೆಯಾಗಿದ್ದ ಕರ್ನಾಟಕ ಮತ್ತು ಗೋವಾ ನಡುವಣ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಮಂಗಳವಾರ ತೆರೆ ಬಿದ್ದಿದ್ದೆ.

ನಾಲ್ಕು ದಿನವೂ ಸ್ನೇಹಿತರು, ಕುಟುಂಬ ಸದಸ್ಯರು, ಚಿಣ್ಣರೊಂದಿಗೆ ಮೈದಾನದತ್ತ ಹೆಜ್ಜೆ ಹಾಕಿ ಹತ್ತಿರದಿಂದ ಆಟ ಕಂಡವರ ಸಂಭ್ರಮ ಕೊನೆಗೊಂಡಿದೆ.

ಐಪಿಎಲ್‌ ಹಾಗೂ ಭಾರತ ತಂಡದಲ್ಲಿ ಆಡಿ ಹೆಸರು ಮಾಡಿರುವ ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ಅರ್ಜುನ್‌ ತೆಂಡೂಲ್ಕರ್‌, ವೈಶಾಖ್‌ ವಿಜಯಕುಮಾರ್‌, ಶ್ರೇಯಸ್‌ ಗೋಪಾಲ್‌ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು, ಹಸ್ತಾಕ್ಷರ ಪಡೆದವರು ‘ಪುನೀತ’ ಭಾವದಲ್ಲಿದ್ದು, ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ.

ADVERTISEMENT

‘ಬಾಲ್‌ ಬಾಯ್‌’ಗಳಾಗಿ ಕಾರ್ಯನಿರ್ವಹಿಸಿದ್ದ ಹುಡುಗರಲ್ಲಿ ಹೊಸ ಹುರುಪು ಮೂಡಿದ್ದು, ಸಾಧನೆಯ ಕನಸೂ ಚಿಗುರೊಡೆದಿದೆ. ಇಂತಹ ಇನ್ನಷ್ಟು ಪಂದ್ಯಗಳು ಇಲ್ಲಿ ನಡೆಯಲಿ ಎಂಬ ಅಭಿಲಾಷೆಯೂ ಹಲವರಿಂದ ವ್ಯಕ್ತವಾಗಿದೆ.

‘ಇಲ್ಲಿ ಸ್ವಚ್ಛಂದವಾದ ಮೈದಾನವಿದೆ. ಪ್ರೇಕ್ಷಕರ ಬೆಂಬಲವೂ ಸಿಗುತ್ತದೆ. ಅದಕ್ಕೆ ಈ ಪಂದ್ಯವೇ ಸಾಕ್ಷಿ. ಆದ್ದರಿಂದ ಪ್ರತಿ ವರ್ಷವೂ ರಣಜಿ ಟ್ರೋಫಿ ಪಂದ್ಯಗಳನ್ನು ಆಯೋಜಿಸಬೇಕು. ಇದರಿಂದ ನಮ್ಮ ಜಿಲ್ಲೆಯ ಜೊತೆಗೆ ನೆರೆಯ ಜಿಲ್ಲೆಗಳ ಕ್ರಿಕೆಟ್‌ ಪ್ರತಿಭೆಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ. ಶಿವಮೊಗ್ಗಕ್ಕೂ ಒಳ್ಳೆ ಹೆಸರು ಸಿಗುತ್ತದೆ’ ಎಂದು ನವುಲೆಯ ಅವಿನಾಶ್‌ ಹೇಳುತ್ತಾರೆ.

‘ಇಲ್ಲಿ ಪಂದ್ಯ ನಡೆದಿದ್ದು ತುಂಬಾ ಖುಷಿ ನೀಡಿದೆ. ಸ್ನೇಹಿತರೊಂದಿಗೆ ಬಂದು ನಾಲ್ಕು ದಿನವೂ ಆಟ ನೋಡಿದ್ದೇವೆ. ಮಂಗಳವಾರ ಗೋವಾ ತಂಡದ ಆಟಗಾರರು ಬೇಗನೆ ಔಟಾಗಿದ್ದರಿಂದ ಕರ್ನಾಟಕ ಗೆಲುವು ದಾಖಲಿಸಬಹುದು ಎಂದು ಭಾವಿಸಿದ್ದೆವು. ಎರಡನೇ ಇನಿಂಗ್ಸ್‌ನಲ್ಲಿ ಆ ತಂಡದ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡಿದರು. ಮಯಂಕ್‌, ಕರುಣ್‌ ಅವರನ್ನು ಟಿ.ವಿಯಲ್ಲಷ್ಟೇ ನೋಡಿದ್ದೆವು. ಇಲ್ಲಿ ಹತ್ತಿರದಿಂದ ಕಾಣುವ ಅವಕಾಶ ಸಿಕ್ಕಿತ್ತು. ಇಂತಹ ಪಂದ್ಯಗಳು ಆಗಾಗ ನಡೆಯಬೇಕು ಎಂಬುದು ನಮ್ಮೆಲ್ಲರ ಆಸೆ’ ಎಂದು ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಓದುತ್ತಿರುವ ತರೀಕೆರೆಯ ಯಶವಂತ್‌ ಹಾಗೂ ನ್ಯಾಮತಿಯ ಗಿರೀಶ್‌ ತಿಳಿಸಿದರು.

‘ರಣಜಿ ಪಂದ್ಯ ನಡೆಯುತ್ತಿರುವ ವಿಷಯ ಗೊತ್ತಾಗಿ ಕರ್ನಾಟಕದ ಆಟಗಾರರನ್ನು ಹುರಿದುಂಬಿಸಲು ಬಂದಿದ್ದೆವು. ಕರ್ನಾಟಕ ತಂಡ ಪಂದ್ಯ ಗೆಲ್ಲಲಿಲ್ಲ ಎಂಬ ಬೇಸರ ಇದೆ. ಮಹಾರಾಜ ಟ್ರೋಫಿ ಕ್ರಿಕೆಟ್‌ ಕೆಎಸ್‌ಸಿಎ ಟಿ–20 ಟೂರ್ನಿಯಲ್ಲಿ ಶಿವಮೊಗ್ಗದ ತಂಡವೂ ಆಡುತ್ತದೆ. ಆ ಪಂದ್ಯಗಳನ್ನೂ ಇಲ್ಲಿ ಆಯೋಜಿಸಿದರೆ ಒಳ್ಳೆಯದು’ ಎಂದು ತೀರ್ಥಹಳ್ಳಿಯ ಆರವ್‌ ಹೇಳಿದರು.

‘ನಮ್ಮ ತಾಲ್ಲೂಕಿನಲ್ಲಿ ಇಂತಹ ಮೈದಾನ ಇಲ್ಲ. ಅಲ್ಲಿ ಕ್ರಿಕೆಟ್‌ ಪಂದ್ಯಗಳೂ ನಡೆಯುವುದಿಲ್ಲ. ಇಲ್ಲಿ ಇಂತಹ ಪಂದ್ಯಗಳು ಇನ್ನೂ ಹೆಚ್ಚಾಗಿ ನಡೆದರೆ ನಮ್ಮಂತಹ ಗ್ರಾಮೀಣ ಪ್ರದೇಶದವರಿಗೆ ಆಟಗಾರರನ್ನು ಹತ್ತಿರದಿಂದ ನೋಡುವ ಅವಕಾಶ ಲಭಿಸುತ್ತದೆ’ ಎಂದು ಹಾವೇರಿಯ ರಿಯಾ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.