ADVERTISEMENT

ಮಲೆನಾಡಿನಲ್ಲಿ ಅಕೇಶಿಯಾ, ನೀಲಗಿರಿ ಬೆಳೆಯಲು ಆರಂಭಿಸಿರುವ ಎಂಪಿಎಂ

ಮರು ನೆಡುತೋಪು: ಸ್ಥಳೀಯರು, ಪರಿಸರಾಸಕ್ತರ ವಿರೋಧ

ವೆಂಕಟೇಶ ಜಿ.ಎಚ್.
Published 15 ಜುಲೈ 2022, 6:11 IST
Last Updated 15 ಜುಲೈ 2022, 6:11 IST
ಸಾಗರ ತಾಲ್ಲೂಕಿನ ಕರೂರು ಹೋಬಳಿ ಕಿರುವಾಸೆ ಬಳಿ ಅಕೇಶಿಯಾ ಮರು ನೆಡುತೋಪು ಮಾಡಲು ಸಿದ್ಧಪಡಿಸಿರುವ ಸರ್ವೆ ನಂ 206ರ ಜಾಗಪ್ರಜಾವಾಣಿ ಚಿತ್ರ: ಸುಕುಮಾರ್
ಸಾಗರ ತಾಲ್ಲೂಕಿನ ಕರೂರು ಹೋಬಳಿ ಕಿರುವಾಸೆ ಬಳಿ ಅಕೇಶಿಯಾ ಮರು ನೆಡುತೋಪು ಮಾಡಲು ಸಿದ್ಧಪಡಿಸಿರುವ ಸರ್ವೆ ನಂ 206ರ ಜಾಗಪ್ರಜಾವಾಣಿ ಚಿತ್ರ: ಸುಕುಮಾರ್   

ಶಿವಮೊಗ್ಗ: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಮಲೆನಾಡಿನಲ್ಲಿ ಮತ್ತೆ ಅಕೇಶಿಯಾ, ನೀಲಗಿರಿ ನೆಡುತೋಪು ಮಾಡಲು ಹೊರಟಿದೆ. ಇದಕ್ಕೆ ಸ್ಥಳೀಯ ಪರಿಸರಾಸಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಶರಾವತಿ ಹಿನ್ನೀರಿನ ಭಾಗ, ಹೊಸನಗರ ತಾಲ್ಲೂಕಿನ ಹುಂಚ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈ ಹಿಂದೆ ಕಡಿತಲೆ ಮಾಡಿದ್ದ ಜಾಗದಲ್ಲಿಯೇ ಅಕೇಶಿಯಾ ಹಾಗೂ ನೀಲಗಿರಿ ಸಸಿ ನೆಡಲು ಎಂಪಿಎಂ ಸ್ವಚ್ಛತಾಕಾರ್ಯ ನಡೆಸಿದೆ.

ಕಾರ್ಖಾನೆಗೆ ಅಗತ್ಯವಿರುವ ಕಚ್ಚಾವಸ್ತು (ಅಕೇಶಿಯಾ, ನೀಲಗಿರಿ) ಬೆಳೆಯಲು 1980ರಲ್ಲಿ ಅಂದಿನ ಸರ್ಕಾರ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಅರಣ್ಯಪ್ರದೇಶ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಭಾಗದಲ್ಲಿ 33,000 ಹೆಕ್ಟೇರ್ ಭೂಮಿಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್) ನೀಡಿತ್ತು. ಅದರಲ್ಲಿ ಪಶ್ಚಿಮಘಟ್ಟದ ಅರಣ್ಯಪ್ರದೇಶದ ವನ್ಯಜೀವಿ ವಲಯ ಸೇರಿಸಿದ್ದಕ್ಕೆ ಅಪಸ್ವರ ಕೇಳಿಬಂದಿತ್ತು. ಹೀಗಾಗಿ, ಸರ್ಕಾರ 13,000 ಹೆಕ್ಟೇರ್ ಭೂಮಿ ವಾಪಸ್ ಪಡೆದಿತ್ತು. ಉಳಿದ 20,000 ಹೆಕ್ಟೇರ್‌ನಲ್ಲಿ ನೆಡುತೋಪು ನಿರ್ಮಿಸಲಾಗಿತ್ತು.

ADVERTISEMENT

ಲೀಸ್ ನವೀಕರಣ: ಕಾರ್ಖಾನೆಗೆ ನೀಡಿದ್ದ ಲೀಸ್ ಅವಧಿ 2020ರ ಆಗಸ್ಟ್ 14ಕ್ಕೆ ಮುಕ್ತಾಯಗೊಂಡಿತ್ತು. ಆದರೆ, ಅದೇ ವರ್ಷ ನವೆಂಬರ್‌ 20ರಂದು ಮತ್ತೆ 40 ವರ್ಷಗಳ ಅವಧಿಗೆ ಗುತ್ತಿಗೆ ನವೀಕರಿಸಲಾಗಿದೆ. ವಿಶೇಷವೆಂದರೆ ಕಾರ್ಖಾನೆ 2015ರಲ್ಲಿಯೇ ಬಂದ್ ಆಗಿದೆ.

‘ಕಾಗದ ಕಾರ್ಖಾನೆ ಪುನರಾರಂಭಿಸಲು ನಾಳೆ ಖಾಸಗಿಯವರು ಮುಂದೆ ಬಂದರೆ ಕಚ್ಚಾವಸ್ತು ಬೆಳೆಯಲು ಭೂಮಿ ಇದೆ ಎಂದು ತೋರಿಸಲು ಗುತ್ತಿಗೆ ಅವಧಿ ನವೀಕರಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎಂಪಿಎಂ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಖಾಸಗಿಯವರಿಗೆ ಅರಣ್ಯಭೂಮಿ ಕೊಡಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಅಕೇಶಿಯಾ, ಹೈಬ್ರೀಡ್ ನೀಲಗಿರಿಯಿಂದ ಸ್ವಾಭಾವಿಕ ಅರಣ್ಯ ಪರಿಸರಕ್ಕೆ ಮತ್ತೆ ಧಕ್ಕೆಯಾಗಲಿದೆ. ಅವು ಬೆಳೆಯುವ ಕಡೆ ಪಕ್ಷಿಗಳು ಗೂಡು ಕಟ್ಟುವುದಿಲ್ಲ. ಪ್ರಾಣಿಗಳ ವಾಸಕ್ಕೂ ಯೋಗ್ಯವಲ್ಲ. ಯಾರಿಗೂ ಹೊಂದಿಕೊಳ್ಳದ ಈ ಗಿಡಗಳಿಂದ ಬೇರೆ ಕಾಡು ತಳಿ ನಾಶವಾಗುತ್ತವೆ’ ಎಂದುನಮ್ಮೂರಿಗೆ ಅಕೇಶಿಯಾ ಬೇಡ ಸಂಘಟನೆ ಸಂಚಾಲಕ, ಶಿವಮೊಗ್ಗದ ಕೆ.ಪಿ.ಶ್ರೀಪಾಲ್ ಹೇಳುತ್ತಾರೆ.

‘ರಾಜ್ಯದಲ್ಲಿ ಅಕೇಶಿಯಾ ಹಾಗೂ ನೀಲಗಿರಿ ಬೆಳೆಯಲು ನಿರ್ಬಂಧ ವಿಧಿಸಿ ಈ ಹಿಂದಿನ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಅದಕ್ಕೂ ಕಿಮ್ಮತ್ತು ಇಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.

ಗ್ರಾಮಸ್ಥರಿಂದ ನ್ಯಾಯಾಲಯಕ್ಕೆ ಮೊರೆ

ಸಾಗರ ತಾಲ್ಲೂಕಿನ ಕರೂರು ಹೋಬಳಿ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಪಿಎಂ ಮರು ನೆಡುತೋಪು ವಿರೋಧಿಸಿ ಕಿರುವಾಸೆ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕಿರುವಾಸೆಯ ಸರ್ವೆ ನಂ. 187, 207, 214 ಹಾಗೂ 185ರಲ್ಲಿ ಒಟ್ಟು 626 ಎಕರೆ ಭೂಮಿಯಲ್ಲಿ ಮರು ನೆಡುತೋಪು ಆರಂಭಿಸಲು ಸಿದ್ಧತೆ ನಡೆದಿದೆ. ಅದಕ್ಕೆ ತಡೆ ನೀಡಲು ಗ್ರಾಮದ ಶಿವರಾಜ್ ಕೆ.ಎನ್. ಮತ್ತಿತರರು ಸಾಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿ ಮಾಡಲಾಗಿದೆ.

ಅಕೇಶಿಯಾ, ನೀಲಗಿರಿ ಮರುನೆಡುತೋಪು ವಿಚಾರ ಸರ್ಕಾರದ ಮಟ್ಟದಲ್ಲಿ ನಿರ್ಧರಿತ ಸಂಗತಿ. ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಮುಂದಿನ ಸಭೆಯಲ್ಲಿ ಸಂಬಂಧಿಸಿದವರ ಗಮನಕ್ಕೆ ತರಲಾಗುವುದು.

- ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ, ಎಪಿಎಂ ವ್ಯವಸ್ಥಾಪಕ ನಿರ್ದೇಶಕ

ಮುಚ್ಚಿರುವ ಕಾರ್ಖಾನೆ ಹೆಸರಿನಲ್ಲಿ ಮತ್ತೆ 40 ವರ್ಷಕ್ಕೆ ಭೂಮಿಯ ಲೀಸ್ ನವೀಕರಣ ಮಾಡಿರುವುದರ ಹಿಂದೆ ಅರಣ್ಯಭೂಮಿ ಕಬಳಿಸುವ ದೊಡ್ಡ ಹುನ್ನಾರ ಅಡಗಿದೆ.

- ಕೆ.ಪಿ.ಶ್ರೀಪಾಲ್, ನಮ್ಮೂರಿಗೆ ಅಕೇಶಿಯಾ ಬೇಡ ಸಂಘಟನೆ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.