ADVERTISEMENT

ಮನವಿ ಕೊಟ್ಟವರ ಮನೆ ವೀಕ್ಷಣೆಗೆ ಬನ್ನಿ: ರೈತರ ಸವಾಲು

ಶಾಸಕರ ಹೇಳಿಕೆಗೆ ಭಾರಿ ವಿರೋಧ; ಸಾಮಾಜಿಕ ಜಾಲತಾಣದಲ್ಲಿ ರಾಸುಗಳ ವಿಡಿಯೊ ಹರಿಬಿಟ್ಟ ಕೃಷಿಕರು

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 2:53 IST
Last Updated 27 ಜುಲೈ 2022, 2:53 IST
ಆನವಟ್ಟಿ ಸಮೀಪದ ದ್ವಾರಳ್ಳಿ ಗ್ರಾಮದ ರೇವಣಪ್ಪ ಅವರ ಕೊಟ್ಟಿಗೆ ಮನೆಯ ಪೋಟೊ ಮತ್ತು ವಿಡಿಯೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ
ಆನವಟ್ಟಿ ಸಮೀಪದ ದ್ವಾರಳ್ಳಿ ಗ್ರಾಮದ ರೇವಣಪ್ಪ ಅವರ ಕೊಟ್ಟಿಗೆ ಮನೆಯ ಪೋಟೊ ಮತ್ತು ವಿಡಿಯೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ   

ಆನವಟ್ಟಿ: ಪಶು ಆಸ್ಪತ್ರೆ ಸ್ಥಳಾಂತರದ ಬಗ್ಗೆಶಾಸಕ ಕುಮಾರ ಬಂಗಾರಪ್ಪ ಅವರು ನೀಡಿರುವ ಹೇಳಿಕೆಗೆ ಆನವಟ್ಟಿ ಸುತ್ತಲ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪಶು ಆಸ್ಪತ್ರೆ ಸ್ಥಳಾಂತರ ಮಾಡಬೇಡಿ ಎಂದು ಅರ್ಜಿ ನೀಡಿದವರು ಹಸು ಕಟ್ಟಿಲ್ಲ. ಹಾಲು ಕರೆದು ಡೇರಿಗೆ ಹಾಕಿಲ್ಲ. ಅವರೆಲ್ಲ ಪ್ಯಾಕೆಟ್ ಹಾಲು ಬಳಸುತ್ತಿದ್ದು, ದನ, ಕರುಗಳ ಬಗ್ಗೆ ಕಾಳಜಿ ಇಲ್ಲ’ ಎಂದು ಸೋಮವಾರ ಸೊರಬದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಹೇಳಿಕೆ ನೀಡಿದ್ದರು.

ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದ್ವಾರಳ್ಳಿ ಹಾಗೂ ಸುತ್ತಲ ಗ್ರಾಮಗಳ ರೈತರು ಹಸು, ಎಮ್ಮೆ, ಕರುಗಳನ್ನು ಕಟ್ಟಿರುವ ತಮ್ಮ ಕೊಟ್ಟಿಗೆಯ ಚಿತ್ರ ಹಾಗೂ ಹಾಲಿನ ಡೇರಿಗಳ ವಿಡಿಯೊ, ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ADVERTISEMENT

‘ನಾವು ಪ್ಯಾಕೆಟ್ ಹಾಲು ಬಳಸುವುದಿಲ್ಲ. ಹಸು, ಕರುಗಳ ಮೇಲೆ ನಮಗೆ ಕಾಳಜಿ ಇದೆ. ಸುತ್ತಲ ಗ್ರಾಮಗಳ ರೈತರಿಗೆ ಅನುಕೂಲವಾಗಿದ್ದ ಪಶು ಆಸ್ಪತ್ರೆ ಸ್ಥಳಾಂತರ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿರುವ ಶಾಸಕರೇ ಇದರ ಹಿಂದೆ ಏನು ಅಡಗಿದೆ ಎಂಬುವುದನ್ನು ಹೇಳಬೇಕು’ ಎಂದು ಅಡಿ ಟಿಪ್ಪಣಿ ಬರೆದಿದ್ದಾರೆ.

ಮನವಿ ಕೊಟ್ಟವರ ಮನೆಗೆ ವೀಕ್ಷಣೆಗೆ ಬನ್ನಿ: ‘ರೈತರ ಬಗ್ಗೆ ಹಗುರವಾಗಿ ಮಾತನಾಡುವ ಕುಮಾರ ಬಂಗಾರಪ್ಪ ಅವರೇ, ‘ಪಶು ಆಸ್ಪತ್ರೆ ಸ್ಥಳಾಂತರ ಮಾಡಬೇಡಿ’ ಎಂದು ಮನವಿ ಕೊಟ್ಟ ರೈತರ ಮನೆಗೆ ವೀಕ್ಷಣೆಗೆ ಬನ್ನಿ. ನಾನು ದ್ವಾರಳ್ಳಿ ಗ್ರಾಮದಲ್ಲಿ 80 ರಾಸುಗಳನ್ನು ಸಾಕಾಣಿಕೆ ಮಾಡುತ್ತಿದ್ದೇನೆ’
ಎಂದು ರೇವಣಪ್ಪ ದ್ವಾರಳ್ಳಿ ಸವಾಲು ಹಾಕಿದರು.

‘ಆನವಟ್ಟಿ ಸುತ್ತಲ ಗ್ರಾಮಗಳಿಗೂ ಅನುಕೂಲವಾಗಲಿ ಎಂದು ದಾನಿಗಳು ಪಶು ಆಸ್ಪತ್ರೆಗೆಂದೇ ಭೂಮಿ ದಾನ ಮಾಡಿದ್ದಾರೆ. ಕೊರತೆ ಇರುವ ಪಶು ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಕಾರಣ ಹೇಳಿ ಪಶು ಆಸ್ಪತ್ರೆ ಸ್ಥಳಾಂತರ ಮಾಡಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ರೈತರಾದ ರೇವಣಪ್ಪ, ದೇವರಾಜ ಜೋಗಳ್ಳೇರ್, ಚನ್ನಪ್ಪ ಗೌಡ, ಚಂದ್ರು ಗೌಡ, ಬೋಜಪ್ಪ ಗೌಡ, ಯುವರಾಜ, ಶಿವಣ್ಣ ಹುಣಸವಳ್ಳಿ ಸೇರಿ ಹಲವು ರೈತರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.