ADVERTISEMENT

ಶಿವಮೊಗ್ಗ | ಅಕ್ಕಿಗಿರಣಿಗಳ ಸುಗಮ ನಿರ್ವಹಣೆಗೆ ಹಲವು ವಿಘ್ನ

ಕೆಲಸಕ್ಕೆ ಕಾರ್ಮಿಕರ ಕೊರತೆ, ಅಕ್ಕಿಯೇತರ ಉತ್ಪನ್ನಗಳ ಸಾಗಣೆ ಸಮಸ್ಯೆ

ಚಂದ್ರಹಾಸ ಹಿರೇಮಳಲಿ
Published 5 ಏಪ್ರಿಲ್ 2020, 6:33 IST
Last Updated 5 ಏಪ್ರಿಲ್ 2020, 6:33 IST
ಶಿವಮೊಗ್ಗ ಶಂಕರಮಠ ರಸ್ತೆಯ ವೆಂಕಟೇಶ್ವರ ಅಕ್ಕಿ ಗಿರಣಿಯಲ್ಲಿ ಹಲ್ಲಿಂಗ್ ಕಾರ್ಯ ಆರಂಭವಾಗಿದೆ.
ಶಿವಮೊಗ್ಗ ಶಂಕರಮಠ ರಸ್ತೆಯ ವೆಂಕಟೇಶ್ವರ ಅಕ್ಕಿ ಗಿರಣಿಯಲ್ಲಿ ಹಲ್ಲಿಂಗ್ ಕಾರ್ಯ ಆರಂಭವಾಗಿದೆ.   

ಶಿವಮೊಗ್ಗ: ರೈತರ ಹಿತದೃಷ್ಟಿಯಿಂದ ಹಾಗೂ ನಿರ್ಬಂಧದ ಸಮಯದಲ್ಲಿ ಅಕ್ಕಿಯ ಕೊರತೆಯಾಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಅಕ್ಕಿ ಗಿರಣಿಗಳ ಆರಂಭಕ್ಕೆ ಅನುಮತಿ ನೀಡಿದೆ. ಆದರೆ, ಹಲವು ಸಮಸ್ಯೆಗಳ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಗಿರಣಿಗಳು ಕಾರ್ಯನಿರ್ವಹಿಸುತ್ತಿಲ್ಲ.

ಜಿಲ್ಲೆಯಲ್ಲಿ 142 ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದವು. ನಿರ್ಬಂಧದ ನಂತರಭತ್ತ ಹಲ್ಲಿಂಗ್ ಕಾರ್ಯ ಸ್ಥಗಿತವಾಗಿತ್ತು. ಜಿಲ್ಲಾಡಳಿತದ ಆದೇಶದ ನಂತರ 64 ಗಿರಣಿಗಳು ಎರಡು ದಿನಗಳಿಂದ ಕಡಿಮೆ ಪ್ರಮಾಣದಲ್ಲಿ ಕೆಲಸ ಆರಂಭಿಸಿವೆ. ಆದರೆ, ಕಾರ್ಮಿಕರ ಕೊರತೆ, ಸಾಗಣೆ ಸಮಸ್ಯೆಯ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಭತ್ತ ಹಲ್ಲಿಂಗ್ ಮಾಡಲು ಸಾಧ್ಯವಾಗಿಲ್ಲ. ಕೆಲವು ಗಿರಣಿಗಳಲ್ಲಿ ಭತ್ತದ ಸಂಗ್ರಹ ಈಗಾಗಲೇ ಮುಗಿದು ಹೋಗಿರುವ ಕಾರಣ ಹೊಸ ಭತ್ತ ಬರುವವರೆಗೂ ಕೆಲಸ ಆರಂಭಿಸುವುದು ಅಸಾಧ್ಯ ಎನ್ನುವಂತಾಗಿದೆ.

ಬಹುತೇಕ ಕಾರ್ಮಿಕರು ಹೊರಗಿನವರು: ಅಕ್ಕಿ ಗಿರಣಿಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು, ಹಮಾಲಿಗಳು ಹೊರ ಜಿಲ್ಲೆಗಳಿಂದ ಬಂದವರು. ಕೊರೊನಾ ನಿರ್ಬಂಧದ ಕಾರಣ ಅವರೆಲ್ಲಸ್ವಂತ ಊರುಗಳಿಗೆ ಮರಳಿದ್ದಾರೆ. ಮತ್ತೆ ಗಿರಣಿ ಆರಂಭವಾಗಿರುವ ಕುರಿತು ಅವರಿಗೆ ಮಾಹಿತಿ ನೀಡಲಾಗಿದ್ದರೂ, ಮರಳಿ ಬರಲು ವಾಹನಗಳು ಸಂಚರಿಸುತ್ತಿಲ್ಲ. ಹಾಗಾಗಿ, ಲಭ್ಯವಿರುವ ಸ್ಥಳೀಯರನ್ನೇ ಬಳಸಿಕೊಂಡು ದಿನದ ಕೆಲವು ಸಮಯ ಮಾತ್ರ ಗಿರಣಿಗಳನ್ನು ನಿರ್ವಹಿಸಲಾಗುತ್ತಿದೆ.

ADVERTISEMENT

ಜಿಲ್ಲೆಯ ಕುಚಲಕ್ಕಿಗೆ ಕೇರಳವೇ ಮಾರುಕಟ್ಟೆ: ಜಿಲ್ಲೆಯ ಬಹುತೇಕ ಮಿಲ್‌ಗಳು ಭತ್ತ ಬೇಯಿಸಿ, ಒಣಗಿಸಿದ ನಂತರ ಹಲ್ಲಿಂಗ್ ಮಾಡುತ್ತವೆ. ಆ ಮೂಲಕಕಚಲಕ್ಕಿ (ಬಾಲ್ಡ್‌ರೈಸ್) ಸಿದ್ಧಪಡಿ ಕೇರಳ, ಕರಾವಳಿ ಭಾಗಕ್ಕೆ ಸಾಗಣೆ ಮಾಡುತ್ತಾ ಬಂದಿವೆ. ಕೇರಳದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಇರುವ ಕಾರಣ ಅಲ್ಲಿಗೆ ತೆರಳಲು, ಮರಳಿ ಬರಲು ಸಾಧ್ಯವಾಗುತ್ತಿಲ್ಲ. ಸಾಗಣೆ ಸಮಸ್ಯೆಯ ಕಾರಣ ಕುಚಲಕ್ಕಿ ತಯಾರಿಕೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮಾಮೂಲಿ ಭತ್ತ ಹಲ್ಲಿಂಗ್ ಮಾಡಿದರೂಅಕ್ಕಿ ತೌಡು,ಭತ್ತದ ಬೂದಿ ಬೇರೆ ಕಡೆ ಸಾಗಿಸಲೂ ಹಮಾಲರು ಬರುತ್ತಿಲ್ಲ.

ಭತ್ತಹಲ್ಲಿಂಗ್ ಮಾಡಿದಾಗ ದೊರಕುವ ಅಕ್ಕಿ ತೌಡು ಎಣ್ಣೆ ತಯಾರಿಗೆ ಬಳಸಲಾಗುತ್ತದೆ. ಈ ತೌಡು ಬೇರೆ ಜಿಲ್ಲೆಗಳಿಗೆ ಕಳುಹಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಎಣ್ಣೆ ತಯಾರಿಸುವ ಫ್ಯಾಕ್ಟರಿಗಳು ಸ್ಥಗಿತವಾಗಿವೆ. ಕುಚಲಕ್ಕಿ ಸಿದ್ಧಪಡಿಸುವಗಿರಣಿಗಳತೌಡು ಬಹುದಿನ ಬಾಳಿಗೆ ಬರುತ್ತದೆ. ಸಾಮಾನ್ಯ ಅಕ್ಕಿ ಸಿದ್ಧಪಡಿಸುವ ಮಿಲ್‌ಗಳ ತೌಡು 24 ಗಂಟೆಯ ಒಳಗೆ ಬಳಕೆ ಮಾಡಬೇಕು. ಈ ಎಲ್ಲ ಕಾರಣಗಳುಅಕ್ಕಿಗಿರಣಿಗಳ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ.

‘ಶಿವಮೊಗ್ಗದ ಅಕ್ಕಿ ಗಿರಣಿಗಳಲ್ಲಿ ಕೆಲಸ ಮಾಡುವ ಬಹುತೇಕ ಹಮಾಲರು ಭಟ್ಕಳದಿಂದ ಬರುತ್ತಾರೆ. ಅವರು ಯಾರೂ ಮರಳಿ ಬಂದಿಲ್ಲ. ಸ್ಥಳೀಯರನ್ನೇ ಬಳಸಿಕೊಂಡು ಶೇ 50ರಷ್ಟು ಹಲ್ಲಿಂಗ್ ಮಾಡುತ್ತಿದ್ದೇವೆ. ಕೆಲಸಕ್ಕೆ ಬರುವ ಕಾರ್ಮಿಕರಿಗೆ ಪಾಸ್‌ ನೀಡಲಾಗಿದೆ’ ಎಂದು ವಿವರ ನೀಡುತ್ತಾರೆ. ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರೂ ಆದ ಜಯದೇವ ರೈಸ್‌ಮಿಲ್‌ ಮಾಲೀಕ ರುದ್ರಸ್ವಾಮಿ.

ಕೊರೊನಾ ಮುಂಜಾಗ್ರತೆ: ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗದಿದ್ದರೂ ಗಿರಣಿಗಳ ಒಳಗೆ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಲಾಗಿದೆ. ಪ್ರತಿ ಕಾರ್ಮಿಕರೂ, ಸಿಬ್ಬಂದಿ, ರೈತರು ಒಳಗೆ ಬರುವಾಗ ಸ್ಯಾನಿಟೈಸರ್‌ ಬಳಸಲು,ಮುಖಗವಸು ಧರಿಸಲುಸ್ವಚ್ಛತೆಗೆ ಆದ್ಯತೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.