ADVERTISEMENT

ರಿಪ್ಪನ್‌ಪೇಟೆ: ಸ್ವಚ್ಛತೆ ಮರೀಚಿಕೆ; ರೋಗದ ಭೀತಿ

ಪ್ಲಾಸ್ಟಿಕ್ ತ್ಯಾಜ್ಯ, ಕಸ, ಕಡ್ಡಿಗಳಿಂದ ತುಂಬಿ ತುಳುಕುತ್ತಿರುವ ಚರಂಡಿಗಳು

ರಿ.ರಾ.ರವಿಶಂಕರ್
Published 13 ಜುಲೈ 2025, 6:28 IST
Last Updated 13 ಜುಲೈ 2025, 6:28 IST
ರಿಪ್ಪನ್‌ಪೇಟೆಯ ಜನವಸತಿ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್ ಪಕ್ಕದಲ್ಲಿಯೇ ಹರಡಿರುವ ತ್ಯಾಜ್ಯ
ರಿಪ್ಪನ್‌ಪೇಟೆಯ ಜನವಸತಿ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್ ಪಕ್ಕದಲ್ಲಿಯೇ ಹರಡಿರುವ ತ್ಯಾಜ್ಯ   

ರಿಪ್ಪನ್‌ಪೇಟೆ: ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿರುವ ಕಾರಣ ವಿವಿಧ ಬಡಾವಣೆಯ ಜನವಸತಿ ಪ್ರದೇಶಗಳಲ್ಲಿ ರೋಗದ ಭೀತಿ ಆವರಿಸಿದೆ. 

‘ಬಹುತೇಕ ಚರಂಡಿಗಳು ಪ್ಲಾಸ್ಟಿಕ್ ತ್ಯಾಜ್ಯ, ಕಸ, ಕಡ್ಡಿಗಳಿಂದ ತುಂಬಿ ತುಳುಕುತ್ತಿವೆ. ಇಲ್ಲಿನ ಚೌಡೇಶ್ವರಿ ಬೀದಿಯಲ್ಲಿ ನಿಂತ ನೀರು ಅಸಹನೀಯ ದುರ್ವಾಸನೆ ಬೀರುತ್ತಿದ್ದು, ದಾರಿಹೋಕರು ಮೂಗು ಮುಚ್ಚಿಕೊಂಡು ನಡೆದಾಡಬೇಕಿದೆ. ಇಲ್ಲಿನ ನಿವಾಸಿಗಳು ಬಾಗಿಲು ಹಾಕಿಕೊಂಡೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಚೌಡೇಶ್ವರಿ ಬೀದಿ ನಿವಾಸಿ ಬಿ. ರಾಜಣ್ಣ ಅಳಲು ತೋಡಿಕೊಂಡರು.

‘ಕುವೆಂಪು ನಗರ, ಪ್ರಗತಿ ನಗರ, ಮದೀನ ಕಾಲೊನಿ, ವಿನಾಯಕ ನಗರ, ಗಾಂಧಿನಗರ, ಶ್ರೀರಾಮನಗರ, ನೆಹರೂ ಬಡಾವಣೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಂಪೂರ್ಣ ಗ್ರಾಮವೇ ಸಾಂಕ್ರಾಮಿಕ ರೋಗದ ಭೀತಿಗೆ ಒಳಗಾಗಿದ್ದು,  ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗಿ ಮಾರ್ಪಟ್ಟಂತೆ ತೋರುತ್ತಿದೆ’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

‘ವಿವಿಧ ಬಡಾವಣೆಗಳಲ್ಲಿ ಹರಡಿರುವ ಕಸದ ರಾಶಿಯು ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ತಂದಿದೆ. ಸ್ಥಳೀಯ ಆಡಳಿತವು ತೆರೆದ ಚರಂಡಿಗಳಲ್ಲಿ ನಿಂತಿರುವ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛಗೊಳಿಸಬೇಕು. ಮೇಲ್ವಿಚಾರಣೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕಕ್ಕೆ ಶಾಸಕರು ಮುಂದಾಗಬೇಕು’ ಎಂದು ಒತ್ತಾಯಿಸಿದರು.‌‌

ರಿಪ್ಪನ್‌ಪೇಟೆಯ ಚೌಡೇಶ್ವರಿ ಬೀದಿಯ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದ್ದು ನಾಗರಿಕರು ಮೂಗು ಮುಚ್ಚಿಕೊಂಡು ನಡೆದಾಡುವಂತಾಗಿದೆ
ಪಟ್ಟಣದಲ್ಲಿ ಮತ್ತೊಮ್ಮೆ ಡೆಂಗಿಯು ಅಮಾಯಕ ಜೀವಗಳನ್ನು ಬಲಿ ಪಡೆಯುವ ಮುನ್ನ ಪರಿಸರ ಸ್ವಚ್ಛತೆ ಗ್ರಾಮ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು
– ಎಂ.ಜಿ. ಹಬೀಬ್, ನಿವೃತ್ತ ಸಮುದಾಯ ಅಭಿವೃದ್ಧಿ ಅಧಿಕಾರಿ

ರಿಪ್ಪನ್‌ಪೇಟೆಗೆ ಮರುಕಳಿಸದಿರಲಿ ಡೆಂಗಿ..

ಕಳೆದ ವರ್ಷ ಮಳೆಗಾಲದ ಆರಂಭದಲ್ಲಿ ಜನರಿಗೆ ಚಳಿಜ್ವರ ಮೈಕೈ ನೋವು ತಲೆನೋವು ಬಾಧಿಸಿದ್ದ ಪ್ರಕರಣಗಳು ಹೆಚ್ಚಿದ್ದವು. ಸ್ಥಳೀಯವಾಗಿ ಸೂಕ್ತ ಚಿಕಿತ್ಸೆ ಸಿಗದೆ ನೂರಾರು ಜನ ಶಿವಮೊಗ್ಗ ಸಾಗರ ತೀರ್ಥಹಳ್ಳಿ ಮೊದಲಾದ ಕಡೆ ತೆರಳಿ ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ಫಲಿಸದೇ ಎರಡು ಅಮೂಲ್ಯ ಜೀವಗಳು ಡೆಂಗಿಗೆ ಬಲಿಯಾಗಿದ್ದವು. ನಂತರ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಆಡಳಿತವು ಜನ ಜಾಗೃತಿ ಮೂಡಿಸಲು ಮುಂದಾಗಿತ್ತು.  ಮಳೆಗಾದಲ್ಲಿ ಡ್ರಮ್ ತೆಂಗಿನ ಚಿಪ್ಪು ಪಾತ್ರೆಗಳಲ್ಲಿ ಸಂಗ್ರಹವಾಗುವ ಸ್ವಚ್ಛ ನೀರಿನಲ್ಲಿ ಈಡಿಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತದೆ. ಇದರಿಂದ ಡೆಂಗಿ ಹರಡುತ್ತದೆ. ಇದು ಸ್ಥಳೀಯರ ನಿದ್ದೆಗೆಡಿಸಿದ್ದು ಈ ಬಾರಿಯ ಮಳೆಗಾಲದಲ್ಲಿ ಡೆಂಗಿ ಮತ್ತೆ ಬಾರದಿರಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.