ರಿಪ್ಪನ್‌ಪೇಟೆ: ಪ್ರಜ್ಞಾವಂತರ ಸದನವೆಂದೇ ಬಿಂಬಿತವಾಗಿರುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೇಲ್ಮನೆ ಎಂಬುದು ಹಿರಿಯರ ಹಾಗೂ ಅನುಭವಿಗಳ, ಚಿಂತಕರ ಚಾವಡಿ. ಅಲ್ಲಿ ನಡೆಯುವ ಪ್ರತಿಯೊಂದು ವಿಚಾರಧಾರೆಗಳು ಪ್ರಬುದ್ಧಮಾನದಲ್ಲಿ ಇರುತ್ತವೆ. ಇಲ್ಲಿ ಸೇವೆ ಸಲ್ಲಿಸುವ ಮನೋಭಾವ ಹೊಂದಿರುವವರು, ಪ್ರಜ್ಞಾವಂತ ಹಾಗೂ ಪ್ರಾಮಾಣಿಕರಾಗಿರಬೇಕು. ನೌಕರರ ಸಮಸ್ಯೆಗಳ ಅರಿವು ಇರಬೇಕು’ ಎಂದರು.
‘ಆ ನಿಟ್ಟಿನಲ್ಲಿ ವೈದ್ಯಕೀಯ ಸೇವೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಡಾ.ಧನಂಜಯ್ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಅನುಭವಿ ರಾಜಕಾರಣಿ ಎಚ್.ಎಲ್. ಭೋಜೇಗೌಡ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ ಎಂದರು.
ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಭ್ಯರ್ಥಿ ಗಳ ಪರ ಮತಯಾಚನೆ ಮಾಡಿದ್ದೇನೆ. ಪಕ್ಷದ ಸಿದ್ಧಾಂತಿಕ ನಿಲುವಿಗೆ ಎಲ್ಲೆಡೆ ಪದವೀಧರ ಮತದಾರರು ಅಭೂತಪೂರ್ವ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಬಳಗವು ಪ್ರತಿ ಮತದಾರನ ಮನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಷಕ್ಕೆ ಸಂಘಟನೆಯೇ ಬಲ: ‘ಬಿಜೆಪಿ ತತ್ವ, ಸಿದ್ಧಾಂತದ ಹಾಗೂ ಸಂಘಟನೆ ಬಲದಿಂದ ಸದೃಢವಾಗಿ ಬೆಳೆದಿದೆ. ಇಲ್ಲಿ ಪ್ರತಿಯೊಂದು ವಿಚಾರಗಳು ಪಕ್ಷದ ಸಂಘಟನೆಗೆ ಒತ್ತು ನೀಡಲಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷಕ್ಕೆ ಮೌಲ್ಯ ಹೆಚ್ಚು. ಹಾಗಾಗಿ ರಘುಪತಿ ಭಟ್ ಅವರ ಬಂಡಾಯದ ಧಗೆಯಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ, ಮೈತ್ರಿ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.