
ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ಇಲ್ಲಿನ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಸಕ್ತರು ಅದರ ಲಾಭ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಮೇಳದಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆಯಿಂದ 50ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಯಾವುದೇ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್ ಸೇರಿದಂತೆ ಹೆಚ್ಚಿನ ಶಿಕ್ಷಣ ಪಡೆದಿರುವ ಯುವಕ-ಯುವತಿಯರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಉಚಿತ ಪ್ರವೇಶಾವಕಾಶವಿದ್ದು, ಯುವತಿಯರಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಈ ಉದ್ಯೋಗ ಮೇಳದಲ್ಲಿ ಐ.ಟಿ, ಕಂಪ್ಯೂಟರ್, ಆಟೊಮೊಬೈಲ್, ಮ್ಯಾನುಫ್ಯಾಕ್ಚರಿಂಗ್, ನರ್ಸಿಂಗ್, ಬ್ಯಾಂಕಿಂಗ್, ಇನ್ಶೂರೆನ್ಸ್ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ದೊರೆಯಲಿವೆ. ವ್ಯಾಸಂಗ ಮುಂದುವರಿಸುತ್ತಿರುವ, ಇಂಟರ್ನ್‌ಶಿಪ್ ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳೂ ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಆಸಕ್ತರು ತಮ್ಮ ಸ್ವವಿವರ, ಭಾವಚಿತ್ರ, ಆಧಾರ್ ಕಾರ್ಡ್, ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣಪತ್ರ ಹಾಗೂ ಅವುಗಳ ಐದು ಜೆರಾಕ್ಸ್ ಪ್ರತಿಗಳೊಂದಿಗೆ ಭಾಗವಹಿಸಬಹುದಾಗಿದೆ. ಆನ್‌ಲೈನ್ ಮೂಲಕ ಹಾಗೂ ಉದ್ಯೋಗ ಮೇಳದ ಸ್ಥಳದಲ್ಲಿ ಖುದ್ದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಎನ್.ಆರ್.ಎಲ್.ಎಂ ಘಟಕ, ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯಿತಿಯ ಎನ್.ಆರ್.ಎಲ್.ಎಂ ವಿಭಾಗಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.